ಆಪರೇಷನ್ ಕಮಲ ಪ್ರಜಾಪ್ರಭುತ್ವಕ್ಕೆ ಮಾರಕ : ಸಿದ್ದರಾಮಯ್ಯ.

52
firstsuddi

ಕೊಪ್ಪಳ : ಆಪರೇಷನ್ ಕಮಲ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇವರೆಲ್ಲ ಪ್ರಜಾಪ್ರಭುತ್ವದ ಬಗ್ಗೆ ಬಹಳ ಮಾತನಾಡುತ್ತಾರೆ. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ತಂದಿದ್ದು ಪ್ರಜಾ ಪ್ರಭುತ್ವಕ್ಕೆ ಮಾರಕ ಅಂತಾರೆ. ಹಾಗಾದರೆ ಇವರು ಮಾಡುತ್ತಿರುವುದೇನು? ಮಧ್ಯ ಪ್ರದೇಶ ಸರ್ಕಾರ ಕಿತ್ತು ಹಾಕಿದವರು ಯಾರು? ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಕಿತ್ತು ಹಾಕಿದವರು ಯಾರು? ಆಪರೇಶನ್ ಕಮಲ ಶುರು ಮಾಡಿದವರೇ ಅವರು. ಆಪರೇಶನ್ ಕಮಲಕ್ಕೆ ಪಾಪದ ಹಣ ಖರ್ಚು ಮಾಡುತ್ತಿದ್ದಾರೆ. ಒಬ್ಬ ಶಾಸಕನಿಗೆ 25 ರಿಂದ 30 ಕೋಟಿ ಹಣ ನೀಡುತ್ತಾರೆ, ಇದೆಲ್ಲವೂ ಲೂಟಿ ಮಾಡಿರುವ ಹಣವಾಗಿದೆ. ಸರ್ಕಾರದಲ್ಲಿ 40 ಪರ್ಸೆಂಟ್ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಸಿಎಂ ಆಗುತ್ತೇನೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಯಾರಾಗಬೇಕೆಂದು ಜನರು ನಿರ್ಧರಿಸುತ್ತಾರೆ. ಅದನ್ನು ಬಿಟ್ಟು ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಕೂರುವುದಕ್ಕೆ ಆಗುತ್ತಾ? ಜೆಡಿಎಸ್ ಒಂದು ರಾಷ್ಟ್ರೀಯ ಪಕ್ಷ ಅಲ್ಲ. ಹಾಗಾಗಿ ಜೆಡಿಎಸ್ ನ ಕೆಲವರು ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ ಅವರು ಯಾರು ಅಂತ ಹೇಳುವುದಿಲ್ಲ. ಪಾಪ ಕುಮಾರಸ್ವಾಮಿ ಮತ್ತೆ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಪಾಪ ಹೇಳಿಕೊಳ್ಳಲಿ ಬಿಡಿ. ಬೇಡ ಅಂದವರ ಯಾರು? ಅವರು ಯಾವ ಮೂಲದಿಂದ ಮುಖ್ಯಮಂತ್ರಿ ಆಗುತ್ತಾರೆ ಗೊತ್ತಿಲ್ಲ ಎಂದರು.

ಸಂಜಯ್ ರಾವತ್‍ಗೆ ಇಡಿ ನೋಟಿಸ್ ನೀಡಿರುವ ವಿಚಾರವಾಗಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಇಡಿ ಛೂ ಬಿಡುತ್ತಿದ್ದಾರೆ. ಸುಮ್ಮನೆ ರಾಹುಲ್ ಗಾಂಧಿಗೆ ತೊಂದರೆ ಕೊಡಲಿಲ್ವಾ? ವಿಚಾರಣೆ ಮಾಡಿ ನಾನು ಬೇಡ ಎಂದು ಹೇಳುವುದಿಲ್ಲ. ಆದರೆ ವಿಚಾರಣೆ ಮಾಡುವುದಕ್ಕೆ ಕೇಸ್ ಇರಬೇಕು ಅಲ್ಲವಾ ಎಂದು ಪ್ರಶ್ನಿಸಿದರು.