ಆಭರಣ ವಿಚಾರಕ್ಕೆ ಆರಂಭವಾದ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯ…

80
firstuddi

ಬೆಂಗಳೂರು : ಮನೆ ಬಾಡಿಗೆ ಕಟ್ಟಲು ಎತ್ತಿಟ್ಟಿದ್ದ ಹಣದಲ್ಲಿ ಆಭರಣ ಖರೀದಿಸಿದ ವಿಚಾರಕ್ಕೆ ಪತಿ, ಪತ್ನಿ ನಡುವೆ ಆರಂಭವಾದ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯವಾಗಿದೆ.

ನಾಜಿಯಾ ಮೃತ ದುರ್ದೈವಿ. ಈ ಘಟನೆ ನವೆಂಬರ್ 2ರಂದು ನಗರದ ದಯಾನಂದ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪತಿ ಫಾರೂಕ್ ಮನೆ ಬಾಡಿಗೆಗೆಂದು ಹಣ ಕೂಡಿಟ್ಟಿದ್ದರು. ಆದರೆ ಒಡವೆಯ ಮೇಲೆ ಆಸೆ ಹೊಂದಿದ್ದ ಪತ್ನಿ ಬಾಡಿಗೆಗೆಂದು ಕೂಡಿಟ್ಟ 6,500 ರೂ. ಹಣದಲ್ಲಿ ಡ್ಯೂಪ್ಲಿಕೇಟ್ ಜ್ಯುವೆಲ್ಲರಿಯನ್ನು ಖರೀದಿ ಮಾಡಿದ್ದಾರೆ. ಬಳಿಕ ಬಾಡಿಗೆ ಹಣ ನೀಡುವಂತೆ ಪತಿ ಕೇಳಿದಾಗ ಹಣ ಖರ್ಚು ಮಾಡಿರುವ ವಿಚಾರವನ್ನು ಪತ್ನಿ ತಿಳಿಸಿದ್ದಾರೆ. ಇದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ಜಗಳ ವಿಕೋಪಕ್ಕೆ ತಿರುಗಿ ಫಾರೂಕ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ನಾಜಿಯಾ ಪ್ರಜ್ಞೆ ತಪ್ಪಿದ್ದಾರೆ. ಪತ್ನಿಯನ್ನು ಕೂಡಲೇ ಫಾರೂಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ನಾಜಿಯಾ ಮೃತಪಟ್ಟಿದ್ದಾರೆ.

ಈ ಸಂಬಂಧ ಮೃತಳ ಪೋಷಕರು ಫಾರೂಕ್ ವಿರುದ್ಧ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಫಾರೂಕ್ ನನ್ನು ಬಂಧಿಸಿದ್ದಾರೆ.