ಆರ್‌ಬಿಐ ಹಣಕಾಸು ನೀತಿ ನ್ಯೂಟ್ರಲ್‍ಗೆ ಬದಲಾವಣೆ.

27

ನವದೆಹಲಿ: ಆರ್‌ಬಿಐ ಹಣಕಾಸು ನೀತಿ ನ್ಯೂಟ್ರಲ್‍ಗೆ ಬದಲಾವಣೆ. ತನ್ನ ಹಣಕಾಸು ನೀತಿಯ ನಿಲುವನ್ನು ನ್ಯೂಟ್ರಲ್‍ಗೆ ಬದಲಾಯಿಸಿದೆ. ಮೂರು ದಿನಗಳ ಕಾಲ ನಡೆದ ಆರ್‌ಬಿಐ ಎಂಪಿಸಿ ಸಭೆಯ ಬಳಿಕ ಗವರ್ನರ್ ಶಕ್ತಿಕಾಂತದಾಸ್ ಸುದ್ದಿಗೋಷ್ಠಿಯಲ್ಲಿ ಈ ನಿಲುವನ್ನು ಪ್ರಕಟಿಸಿದ್ದಾರೆ. ಈ ಮೊದಲು ಹಲವು ತಿಂಗಳಿಂದ ಆರ್‌ಬಿಐ ವಿತ್‍ಡ್ರಾಯಲ್ ಆಫ್ ಅಕಾಮೊಡೇಶನ್ ನಿಲುವನ್ನು ಹೊಂದಿತ್ತು. ಈಗ ಆ ನೀತಿಯನ್ನು ನ್ಯೂಟ್ರಲ್‍ಗೆ ಬದಲಿಸಿದೆ. ಈ ಮೂಲಕ ಮುಂದಿನ ಸಭೆಗಳಲ್ಲಿ ಬಡ್ಡಿದರಗಳನ್ನು ಇಳಿಸುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಆರ್‍ಬಿಐನ ಹಣಕಾಸು ನೀತಿಯಲ್ಲಿ ಮೂರು ವಿಧ ಇವೆ. ಅಕಾಮೊಡೇಶನ್, ನ್ಯೂಟ್ರಲ್ ಮತ್ತು ವಿತ್‍ಡ್ರಾಯಲ್. ಅಕಾಮೊಡೇಶನ್ ಎಂದರೆ ಆರ್ಥಿಕತೆಯ ಬೆಳವಣಿಗೆಯನ್ನು ಉತ್ತೇಜಿಸಲು ಹಣದ ಹರಿವಿನ ಹೆಚ್ಚಳಕ್ಕೆ ಆರ್‍ಬಿಐ ಕ್ರಮ ಕೈಗೊಳ್ಳುತ್ತದೆ. ವಿತ್‍ಡ್ರಾಯಲ್ ಆಫ್ ಅಕಾಮೊಡೇಶನ್ ಎಂದರೆ, ಆರ್ಥಿಕ ವ್ಯವಸ್ಥೆಯಲ್ಲಿ ಹಣದ ಹರಿವನ್ನು ಕಡಿಮೆಗೊಳಿಸುವ ಮೂಲಕ ಹಣದುಬ್ಬರ ಏರಿಕೆಗೆ ಕಡಿವಾಣ ಹಾಕಲು ಆರ್‍ಬಿಐ ಯತ್ನಿಸುತ್ತದೆ. ಹಣ ಹೆಚ್ಚಾಗಿದ್ದರೆ ವಸ್ತುಗಳ ಬೆಲೆ ಹೆಚ್ಚುತ್ತದೆ. ಹಣದ ಹರಿವು ಕಡಿಮೆ ಇದ್ದರೆ ವಸ್ತುಗಳ ಬೆಲೆ ಕಡಿಮೆ ಆಗುತ್ತದೆ ಎಂಬುದು ತರ್ಕ. ಆರ್‌ಬಿಐ ನ ನ್ಯೂಟ್ರಲ್ ಹಣಕಾಸು ನೀತಿಯಲ್ಲಿ ಸಂದರ್ಭಕ್ಕೆ ತಕ್ಕಂತೆ ನಿಲುವುಗಳನ್ನು ತೆಗೆದುಕೊಳ್ಳುವುದಕ್ಕೆ ಆದ್ಯತೆ ಕೊಡಲಾಗುತ್ತದೆ. ಅಂದರೆ, ಹಣದುಬ್ಬರ ಏರುತ್ತಿದೆ ಎಂದರೆ ರಿಪೋ ದರವನ್ನು ಹೆಚ್ಚಿಸಬಹುದು. ಹಣದುಬ್ಬರ ಕಡಿಮೆ ಆಗುತ್ತಿದೆ ಎಂದರೆ ರಿಪೋ ದರ ಕಡಿಮೆಗೊಳಿಸಬಹುದು. ಹೀಗಾಗಿ, ಆರ್‌ಬಿಐನ ನ್ಯೂಟ್ರಲ್ ಪಾಲಿಸಿಯು ಮುಂದಿನ ದಿನಗಳಲ್ಲಿ ಬಡ್ಡಿದರ ಇಳಿಸುವ ಮುನ್ಸೂಚನೆ ಕಾಣುತ್ತಿದೆ.