ಇಂದು ಪಂಚರಾಜ್ಯ ಚುನಾವಣೆ ಮತದಾನ…

117
firstsuddi

ನವದೆಹಲಿ : ಇಂದು ಪಂಚ ರಾಜ್ಯಗಳ ಚುನಾವಣೆ ಮತದಾನ ಆರಂಭಗೊಂಡಿದ್ದು, ತಮಿಳುನಾಡು, ಪಶ್ಚಿಮ ಬಂಗಾಳ ಕೇರಳ, ಪುದುಚೇರಿ ಮತ್ತು ಅಸ್ಸಾಂ ನಲ್ಲಿ ಮತದಾನ ನಡೆಯಲಿದೆ. ಕೇರಳ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಮೊದಲ ಹಂತದ ಮತದಾನ ನಡೆಯಲಿದ್ದು, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಮತದಾನ ನಡೆಯಲಿದೆ. ಪಶ್ಚಿಮ ಬಂಗಾಳ ಹೊರತುಪಡಿಸಿ ಉಳಿದ 4 ರಾಜ್ಯಗಳಲ್ಲಿ ಚುನಾವಣೆ ಮುಕ್ತಾಯಗೊಳ್ಳಲಿದ್ದು, ಮೇ.2 ರಂದು ಫಲಿತಾಂಶ ಹೊರಬೀಳಲಿದೆ.

ಕೇರಳದಲ್ಲಿ, ಎಲ್ಲಾ 140 ವಿಧಾನಸಭಾ ಕ್ಷೇತ್ರಗಳ ಮತದಾನ ನಡೆಯಲಿದ್ದು, ಒಟ್ಟು 2,74,46,039 ಮತದಾರರಿದ್ದಾರೆ ಇದಕ್ಕಾಗಿ ಒಟ್ಟು 40,771 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಬಾರಿ ಒಟ್ಟು 957 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಿಪಿಐ(ಎಂ) ನೇತೃತ್ವದಲ್ಲಿ ಎಲ್ಡಿಎಫ್, ಕಾಂಗ್ರೆಸ್ ನೇತೃತ್ವದಲ್ಲಿ ಯುಡಿಎಫ್, ಮತ್ತು ಬಿಜೆಪಿ ನೇತೃತ್ವದಲ್ಲಿ ಎನ್ಡಿಎ ಮಿತ್ರ ಪಕ್ಷಗಳ ಸ್ಪರ್ಧೆ ಮಾಡಿವೆ.

ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಇಂದು ಕೂಡ ಮತದಾನ ನಡೆಯಲಿದ್ದು, ಒಟ್ಟು 30 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಇದರಲ್ಲಿ 324 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಲ್ಲಿ ಪುದುಚೇರಿಯ 30 ಕ್ಷೇತ್ರಗಳಲ್ಲಿ 324 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು ಒಟ್ಟು 10,04,507 ಮತದಾರರು ತಮ್ಮ ಮತದಾನ ಚಲಾಯಿಸಲಿದ್ದಾರೆ. ಮತದಾನಕ್ಕಾಗಿ 1,558 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ತಮಿಳುನಾಡಿನಲ್ಲಿ ಒಟ್ಟು 234 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಒಟ್ಟು 3,998 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 88,937 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ತಮಿಳುನಾಡಿನ ಬಲಿಷ್ಠ ರಾಜಕೀಯ ನಾಯಕರಾದ ಡಿಎಂಕೆ ನಾಯಕ ಎಂ ಕರುಣಾನಿಧಿ ಹಾಗೂ ಎಐಎಡಿಎಂಕೆ ನಾಯಕಿ ಜೆ. ಜಯಲಲಿತಾ ಅವರ ಅನುಪಸ್ಥಿತಿಯಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.

ಪಶಿಮ ಬಂಗಾಳದಲ್ಲಿ ಇಂದು ಮೂರು ಜಿಲ್ಲೆಯ 31 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, 78,52,425 ಮಂದಿ ಮತದಾರರಿಂದ 205 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಖುದ್ದು ಮತ ಪ್ರಚಾರಕ್ಕೆ ಇಳಿದಿದ್ದ ದೀದಿ, ಎಡ ಪಕ್ಷಗಳಿಂದ ಮನೆ ಮನೆ ಪ್ರಚಾರ ನಡೆಸಿದ್ದರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್, ಸ್ಮೃತಿ ಇರಾನಿ ಪ್ರಚಾರ ನಡೆಸಿದ್ದರು. ದೀದಿ ಹಾಗೂ ಮೋದಿ ನಡುವೆ ನೇರ ಸಂಘರ್ಷಕ್ಕೆ ಮೂರು ಜಿಲ್ಲೆಗಳಲ್ಲಿ ನಡೆಯುವ ಸಾಧ್ಯತೆಯಿದೆ.

ಇನ್ನೂ ಅಸ್ಸಾಂನಲ್ಲಿ ಇಂದು ಕೊನೆಯ ಹಂತದ ಮತದಾನ ನಡೆಯಲಿದ್ದು, 39,07,963 ಮಹಿಳೆಯರು ಮತ್ತು 139 ಮಂಗಳಮುಖಿಯರು ಸೇರಿದಂತೆ ಒಟ್ಟು 79,19,641 ಮತದಾರರು ರಾಜ್ಯಾದ್ಯಂತ 11 ಜಿಲ್ಲೆಗಳಲ್ಲಿ 40 ಕ್ಷೇತ್ರಗಳ 11,401 ಮತಗಟ್ಟೆಗಳಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. 337 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಇಂದು ನಿರ್ಧರಿಸಲಿದ್ದಾರೆ.