ಇಂದು ರಾಷ್ಟ್ರಪತಿ ಚುನಾವಣೆ – ಮತ ಚಲಾಯಿಸಿದ ಪ್ರಧಾನಿ ನರೇಂದ್ರ ಮೋದಿ.

124
firstsuddi

ನವದೆಹಲಿ : ಭಾರತದ 15ನೇ ರಾಷ್ಟ್ರಪತಿ ಆಯ್ಕೆಗೆ ಇಂದು ಚುನಾವಣೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮತ ಚಲಾಯಿಸಿದರು.

ರಾಷ್ಟ್ರಪತಿ ಚುನಾವಣೆಗೆ ಸಂಸತ್ತಿನ ಆವರಣದಲ್ಲಿ ಮತಗಟ್ಟೆಯನ್ನು ಸ್ಥಾಪಿಸಲಾಗಿದ್ದು, ಅಲ್ಲಿ ಸಂಸದರು ಮತ ಚಲಾಯಿಸುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತ ಚಲಾಯಿಸಿದ್ದಾರೆ. ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಈ ಚುನಾವಣೆಗೆ ಚುನಾವಣಾಧಿಕಾರಿಯಾಗಿದ್ದಾರೆ.

ಎನ್ ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು, ವಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ ಸಿನ್ಹಾ ಕಣದಲ್ಲಿದ್ದಾರೆ. ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಶೇ.60ರಷ್ಟು ಮತಗಳೊಂದಿಗೆ ಗೆಲ್ಲುವುದು ಬಹುತೇಕ ಖಚಿತವಾಗಿದೆ. ಒಟ್ಟು 776 ಸಂಸತ್ ಸದಸ್ಯರು ಮತ್ತು 4,033 ಶಾಸಕರು ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.

ಸಂಸತ್ ಭವನ ಮತ್ತು ರಾಜ್ಯ ವಿಧಾನಸೌಧಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಜುಲೈ 21ಕ್ಕೆ ಫಲಿತಾಂಶ ಪ್ರಕಟವಾಗಲಿದ್ದು, ಜುಲೈ 25ಕ್ಕೆ ಹೊಸ ರಾಷ್ಟ್ರಪತಿ ಪ್ರಮಾಣ ಸ್ವೀಕರಿಸಲಿದ್ದಾರೆ.