ಇಂದು ಹಿಮಾಚಲ ಪ್ರದೇಶ ಚುನಾವಣೆ – 68 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ…

88
firstsuddi

ಶಿಮ್ಲಾ : ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಮತದಾನ ಈಗಾಗಲೇ ಆರಂಭವಾಗಿದೆ. ಇಂದು ಬೆಳಗ್ಗೆ 8 ಗಂಟೆಯಿಂದ 5ಗಂಟೆಯವೆರೆಗೆ ಮತದಾನ ನಡೆಯಲಿದೆ.

68 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಒಟ್ಟು 55 ಲಕ್ಷ ಮತದಾರರು 68 ಕ್ಷೇತ್ರದ 412 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ, ಕಾಂಗ್ರೆಸ್, ಎಎಪಿ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಚುನಾವಣಾ ಆಯೋಗದ ಪ್ರಕಾರ, ಒಟ್ಟು 55,92,828 ಮತದಾರರಲ್ಲಿ 27,37,845 ಮಹಿಳೆಯರು, 28,54,945 ಪುರುಷರು ಮತ್ತು 38 ತೃತೀಯಲಿಂಗಿಗಳು ಮತ ಚಲಾಯಿಸಲಿದ್ದಾರೆ. ಈ ಬಾರಿ 24 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮತದಾನ ವೇಳೆ ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತ ಮತದಾನ ನಡೆಸಲು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 67 ಕಂಪನಿಗಳು ಮತ್ತು 11,500 ಕ್ಕೂ ಹೆಚ್ಚು ರಾಜ್ಯ ಪೊಲೀಸ್ ಸಿಬ್ಬಂದಿ ಸೇರಿದಂತೆ ಸುಮಾರು 30,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಡಿಸೆಂಬರ್ 8ರಂದು ಮತ ಎಣಿಕೆ ನಡೆಯಲಿದೆ.