ಇಡೀ ವಿಶ್ವ ಇಂದು ಭಾರತದತ್ತ ತಿರುಗಿ ನೋಡುತ್ತಿದೆ : ದ್ರೌಪದಿ ಮುರ್ಮು.

51
firstsuddi

ನವದೆಹಲಿ : ಇಂದಿನಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಸದನವನ್ನುದ್ದೇಶಿಸಿ ಮಾತನಾಡಿದರು. ಇಡೀ ವಿಶ್ವವೇ ಇಂದು ಭಾರತದತ್ತ ತಿರುಗಿ ನೋಡುತ್ತಿದೆ. ವಿಶ್ವ ದೇಶಗಳು ಭಾರತದಿಂದ ನೆರವು ನಿರೀಕ್ಷಿಸುವ ಹಂತಕ್ಕೆ ಪರಿವರ್ತನೆ ಆಗಿದೆ ಎಂದು ತಿಳಿಸಿದರು.

ಇಂದು ದೇಶದಲ್ಲಿ ಸ್ಥಿರ, ನಿರ್ಭೀತ, ನಿರ್ಣಾಯಕ ಸರ್ಕಾರವಿದೆ. ಅದು ದೊಡ್ಡ ಕನಸುಗಳನ್ನು ನನಸಾಗಿಸಲು ಕೆಲಸ ಮಾಡುತ್ತಿದೆ. ದೇಶದ ಆತ್ಮಸ್ಥೈರ್ಯ ಅತ್ಯುನ್ನತ ಮಟ್ಟದಲ್ಲಿದೆ. ಜಗತ್ತು ನಮ್ಮನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುತ್ತಿದೆ. ಭಾರತವು ಜಗತ್ತಿಗೆ ಪರಿಹಾರಗಳನ್ನು ನೀಡುವಷ್ಟು ಸಶಕ್ತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಸವೇಶ್ವರರ ಕಾಯಕವೇ ಕೈಲಾಸ ಮಾತಿನಂತೆ ನನ್ನ ಸರ್ಕಾರ ಕೆಲಸ ಮಾಡುತ್ತಿದೆ. ನನ್ನ ಸರ್ಕಾರ ಬಡವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮತ್ತು ಅವರನ್ನು ಸಬಲೀಕರಣಗೊಳಿಸಲು ಕೆಲಸ ಮಾಡುತ್ತಿದೆ. ಸೂಪರ್ ಸ್ಪೀಡ್ ಸ್ಕಿಲ್ ವರ್ಕ್, ಹೊಸ ತಂತ್ರಜ್ಞಾನ ಬಳಸಿಕೊಂಡು ಕೆಲಸ ಮಾಡುವ ಸರ್ಕಾರ ಸಿಕ್ಕಿದೆ. ಎರಡು ಬಾರಿ ಸ್ಥಿರ ಸರ್ಕಾರ ಆಯ್ಕೆ ಮಾಡಿದ ಜನರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದರು.

ನಾವು ಆತ್ಮನಿರ್ಭರ್ (ಸ್ವಾವಲಂಬಿ) ಆಗಿರುವ ಭಾರತವನ್ನು ಕಟ್ಟಬೇಕಿದೆ. 2047ರೊಳಗೆ ನಮ್ಮ ಪ್ರಾಚೀನ ಪರಂಪರೆ ಬಗ್ಗೆ ಹೆಮ್ಮೆ ಇರುವ ಮತ್ತು ಆಧುನಿಕತೆಯ ಎಲ್ಲಾ ಮಹತ್ವವನ್ನೂ ಹೊಂದಿರುವ ದೇಶ ನಮ್ಮದಾಗಬೇಕಿದೆ. ಭ್ರಷ್ಟಾಚಾರವು ನಮ್ಮ ಪ್ರಜಾತಂತ್ರ ಮತ್ತು ಸಾಮಾಜಿಕ ನ್ಯಾಯದ ಅತಿದೊಡ್ಡ ಶತ್ರು ಎಂಬುದು ನನ್ನ ಸರ್ಕಾರದ ಸ್ಪಷ್ಟ ಅಭಿಪ್ರಾಯ. ಕಳೆದ ಕೆಲ ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ನಡೆಯುತ್ತಿದೆ. ಪ್ರಾಮಾಣಿಕರಿಗೆ ನಮ್ಮ ವ್ಯವಸ್ಥೆಯಲ್ಲಿ ಗೌರವ ಸಿಗುವುದನ್ನು ಖಾತ್ರಿಪಡಿಸುತ್ತಿದ್ದೇವೆ ಎಂದರು.

ನನ್ನ ಸರ್ಕಾರಕ್ಕೆ ದೇಶದ ಹಿತಾಸಕ್ತಿಯೇ ಎಲ್ಲಕ್ಕಿಂತ ಹೆಚ್ಚು. ಅದಕ್ಕಾಗಿ ಸರ್ಕಾರ ನೀತಿ ಮತ್ತು ಕಾರ್ಯತಂತ್ರವನ್ನು ಸಂಪೂರ್ಣವಾಗಿ ಬದಲಾವಣೆ ಕೂಡ ಮಾಡಿದೆ. ಜನ್ ಧನ್ ಖಾತೆಯಿಂದ ಹಿಡಿದು ಒನ್ ನೇಶನ್ ಒನ್ ರೇಷನ್ ಕಾರ್ಡ್ ಯೋಜನೆವರೆಗೂ ಸರ್ಕಾರ ಭಾರೀ ಮಟ್ಟದಲ್ಲಿ ಖಾಯಂ ಸುಧಾರಣೆ ತಂದಿದೆ ಎಂದರು.