ಇನ್ಮುಂದೆ ಸಂಸತ್ತಿನಲ್ಲಿ ಈ ಪದಗಳನ್ನು ಬಳಸುವಂತಿಲ್ಲ…

44
firstsuddi

ನವದೆಹಲಿ : ಇನ್ನು ಮುಂದೆ ಲೋಕಸಭೆ, ರಾಜ್ಯಸಭೆ ಅಧಿವೇಶನಗಳಲ್ಲಿ ಅಸಂಸದೀಯ ಪದಗಳನ್ನು ಬಳಸುವಂತಿಲ್ಲ ಎಂದು ಲೋಕಸಭೆಯ ಸೆಕ್ರಟೇರಿಯಟ್ ಬಿಡುಗಡೆಗೊಳಿಸಿದ ಕಿರು ಪುಸ್ತಕದಲ್ಲಿ ತಿಳಿಸಲಾಗಿದೆ. ಜುಲೈ 18 ರಂದು ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗಲಿದ್ದು, ಅದಕ್ಕೂ ಮುನ್ನ ಹೊಸ ಅಸಂಸದೀಯ ಪದಗಳ ಕೈಪಿಡಿ ಪ್ರಕಟಿಸಲಾಗಿದೆ.

ಲೋಕಸಭೆಯಲ್ಲಿನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 380ರ ಪ್ರಕಾರ, ಕಲಾಪದ ಸಂದರ್ಭದಲ್ಲಿ ಅಸಂಸದೀಯ ಪದಗಳನ್ನು ಬಳಸಿದರೆ ಸ್ಪೀಕರ್, ಅವರನ್ನು ಕಲಾಪದಿಂದ ಹೊರ ಹಾಕುತ್ತಾರೆ. ರಾಜ್ಯಸಭಾ ಅಧ್ಯಕ್ಷರು ಅಥವಾ ಲೋಕಸಭಾ ಸ್ಪೀಕರ್ ಅಧಿವೇಶನದ ವೇಳೆ ಸದನದಲ್ಲಿ ಮಾತನಾಡುವ ಮಾತುಗಳನ್ನು ಗಮನಿಸುತ್ತಾರೆ. ಕೆಲವೊಮ್ಮೆ ಸಭಾಪತಿಯವರು ಅಸಂಸದೀಯ ಪದಗಳನ್ನು ಕಡತದಿಂದ ತೆಗೆದು ಹಾಕುತ್ತಾರೆ. ಆದರೆ ಸಭಾಪತಿಗೆ ಯಾವುದೇ ಪದಗಳ ನಿರ್ಬಂಧ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಜುಮ್ಲಾಜೀವಿ, ಬಾಲ ಬುದ್ಧಿ, ಕೋವಿಡ್ ಸ್ಪ್ರೆಡರ್, ನಾಚಿಕೆಗೇಡು, ದ್ರೋಹ, ಭ್ರಷ್ಟ, ಅಸಮರ್ಥ, ಸರ್ವಾಧಿಕಾರಿ, ಶಕುನಿ, ತಾನಾಶಾಹಿ, ಜೈಚಂದ್, ವಿನಾಶ್ ಪುರುಷ್, ಖಲಿಸ್ತಾನಿ, ಖೂನ್ ಸೆ ಖೇತಿ, ದೋಹ್ರಾ ಚರಿತ್ರ, ನಿಕಮ್ಮ, ನೌಟಂಕಿ, ಢಿಂಢೋರ ಪೀಟ್ನಾ, ಬೆಹ್ರಿ ಸರ್ಕಾರ್ ಮುಂತಾದ ಪದಗಳನ್ನೂ ಅಸಂಸದೀಯ ಎಂದು ಗುರುತಿಸಲಾಗಿದ್ದು, ಇಂತಹ ಪದಗಳನ್ನು ಬಳಸಿದರೂ ಕಡತದಿಂದ ತೆಗೆದುಹಾಕಲಾಗುತ್ತದೆ.

ರಕ್ತಪಾತ, ರಕ್ತಸಿಕ್ತ, ದ್ರೋಹ, ವಂಚನೆ, ಚಮ್ಚಾ, ಚಮ್ಚಾಗಿರಿ, ಚೇಲಾಸ್, ಬಾಲಿಶ, ಹೇಡಿ, ಕ್ರಿಮಿನಲ್, ಮೊಸಳೆ ಕಣ್ಣೀರು ಸೇರಿದೆ. ಇವುಗಳ ಹೊರತಾಗಿ ಅವಮಾನ, ಕತ್ತೆ, ನಾಟಕ, ಕಣ್ಣೊರೆಸುವ ತಂತ್ರ, ಗೂಂಡಾಗಿರಿ, ಅಸಮರ್ಥ, ಸುಳ್ಳು, ಗದ್ದಾರ್, ಗಿರ್ಗಿಟ್, ಗಢಿಯಾಲಿ ಆಂಸು, ಅಪಮಾನ್, ಅಸತ್ಯ, ಅಹಂಕಾರ್, ಕಾಲಾ ದಿನ್, ಕಾಲಾ ಬಜಾರ್, ದಂಗ, ದಲಾಲ್, ದಾದಾಗಿರಿ, ಬೆಚಾರ, ಬಾಯ್ಕಟ್. ಲಾಲಿಪಾಪ್, ಸಂವೇದನಾಹೀನ್, ಲೈಂಗಿಕ ಕಿರುಕುಳ ಇವೂ ಸಹ ಕೈಪಿಡಿಯ ಪ್ರಕಾರ ಅಸಂಸದೀಯ ಪದಗಳಾಗಿವೆ.

ಈ ಕ್ರಮಕ್ಕೆ ಕಾಂಗ್ರೆಸ್ ಹಾಗೂ ಟಿಎಂಸಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಸಂಸದೆ ಮೆಹುವಾ ಮೊಯಿತ್ರಾ ಹಾಗೂ ಸಂಸದ ಡೆರಕ್ ನಾವು ಈ ಪದಗಳನ್ನು ಬಳಸುತ್ತೇವೆ, ಬೇಕಿದ್ದರೆ ಅಮಾನತು ಮಾಡಿ ಎಂದು ತಿರುಗೇಟು ನೀಡಿದ್ದಾರೆ.