ಉತ್ತರ ಆಫ್ರಿಕಾದ ಮೊರಾಕ್ಕೋದಲ್ಲಿ 6.8 ತೀವ್ರತೆಯ ಭೂಕಂಪ- 300ಕ್ಕೂ ಹೆಚ್ಚು ಜನರು ಸಾವು…

50
firstsuddi

ರಬತ್: ನಿನ್ನೆ ತಡರಾತ್ರಿ ಉತ್ತರ ಆಫ್ರಿಕಾದ ಮೊರಾಕ್ಕೋದಲ್ಲಿ ಭಾರೀ ಭೂಕಂಪ ಸಂಭವಿಸಿದ್ದು, ಸುಮಾರು 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮೊರಾಕ್ಕೋದ ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಮತ್ತು ಅಲರ್ಟ್ ನೆಟ್‍ವರ್ಕ್ ರಿಕ್ಟರ್ ಮಾಪಕದಲ್ಲಿ 6.8 ತೀವ್ರತೆ ದಾಖಲಾಗಿದೆ. ಪ್ರಸಿದ್ಧ ಪ್ರವಾಸಿ ತಾಣವಾದ ಮರಕೇಶ್‍ನ ನೈಋತ್ಯದ 71 ಕಿಲೋಮೀಟರ್ ದೂರದ 18.5 ಕಿಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ. ಭೂಕಂಪದ ತೀವ್ರತೆಗೆ ಪುರಾತನ ಕಟ್ಟಡಗಳು ಸೇರಿದಂತೆ ಅನೇಕ ಕಟ್ಟಡಗಳಿಗೆ ಹಾನಿಯಾಗಿದೆ.

ಭೂಕಂಪದಿಂದಾಗಿ ನಗರದಲ್ಲಿ ವಿದ್ಯುತ್ ಹಾಗೂ ದೂರವಾಣಿ ಸಂಪರ್ಕ ಸ್ಥಗಿತಗೊಂಡಿದೆ. ಈಗ ತಾತ್ಕಾಲಿಕ ನೆಟ್‍ವರ್ಕ್ ವ್ಯವಸ್ಥೆ ಮಾಡಲಾಗಿದೆ. ಘಟನೆಯಲ್ಲಿ ನೂರಾರು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಮರಕೇಶ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮನೆಗಳು, ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಹಲವಾರು ಜನರು ಸಿಲುಕಿಕೊಂಡಿದ್ದು ರಕ್ಷಣಾ ಕಾರ್ಯಗಳು ಭರದಿಂದ ನಡೆಯುತ್ತಿವೆ. ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಮೊರಾಕ್ಕೋ ಪೊಲೀಸರು ಹೇಳಿದ್ದಾರೆ.

ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದು, ಮೊರಾಕ್ಕೋದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಪ್ರಾಣಹಾನಿ ಉಂಟಾಗಿದೆ. ಇದರಿಂದ ತೀವ್ರ ನೋವಾಗಿದೆ. ಮೊರಾಕ್ಕೋದ ಜನರೊಂದಿಗೆ ಭಾರತ ಇದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಈ ಸಂಕಷ್ಟದ ಸಮಯದಲ್ಲಿ ಮೊರಾಕ್ಕೋಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಭಾರತ ಸಿದ್ಧವಿದೆ ಎಂದು ಟ್ವೀಟ್ ಮಾಡಿದ್ದಾರೆ.