ಬೆಂಗಳೂರು : ಉದಯಪುರದಲ್ಲಿ ನಡೆದಿರುವ ಪ್ರಕರಣ ಅಮಾನವೀಯ ಮತ್ತು ಅತ್ಯಂತ ಹೇಯ ಕೃತ್ಯವಾಗಿದೆ. ಈ ಪ್ರಕರಣದ ಹಿಂದೆ ಅಂತಾರಾಷ್ಟ್ರೀಯ ಷಡ್ಯಂತ್ರವಿದ್ದು, ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಆರ್.ಟಿ ನಗರದ ತಮ್ಮ ಖಾಸಗಿ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉದಯಪುರ ಘಟನೆ ಕುರಿತು ರಾಜಸ್ಥಾನ ಸರ್ಕಾರ ಕೂಡಲೇ ಎಲ್ಲ ರೀತಿಯ ಕ್ರಮಗಳನ್ನು ಜರುಗಿಸಬೇಕು. ಅದರ ಸಂಪೂರ್ಣ ತನಿಖೆ ಮಾಡಬೇಕು. ಅಪರಾಧಿಗಳನ್ನು ಗಲ್ಲಿಗೇರಿಸಬೇಕು. ಹಂತಕರ ಹಿಂದೆ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಸ್ಥೆಗಳು ಎಲ್ಲವೂ ಇವೆ. ಹೀಗಾಗಿ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಜಿಎಸ್ ಟಿ ಮಂಡಳಿ ಸಭೆಯಲ್ಲಿ ರಾಜ್ಯಗಳಿಗೆ ಜಿಎಸ್ ಟಿ ಪರಿಹಾರವನ್ನು ವಿಸ್ತರಿಸುವ ಬಗ್ಗೆ ಚರ್ಚೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಜಿಎಸ್ ಟಿ ಕಾನೂನು ಸಮಿತಿಯು ಕಾನೂನು ತೊಡಕುಗಳನ್ನು ನಿವಾರಣೆ ಮಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ. ಫಿಟ್ ಮೆಂಟ್ ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಲಾಗಿದೆ ಎಂದರು.










