ಎಎಸ್‍ಐ ಮನೆಗೆ ನುಗ್ಗಿ ದರೋಡೆ – ಮೂವರು ಆರೋಪಿಗಳ ಬಂಧನ…

70
firstsuddi

ಚಿಕ್ಕಬಳ್ಳಾಪುರ : ತಾಲೂಕಿನ ಪೇರೇಸಂದ್ರ ಗ್ರಾಮದ ಎಎಸ್ಐ ನಾರಾಯಣಸ್ವಾಮಿ ಅವರ ಮನೆಗೆ ನುಗ್ಗಿ ದರೋಡೆ ಮಾಡಿದ ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಅರೀಫ್(35) ಹಾಗೂ ಜಮಷೀದ್ ಖಾನ್(27) ಸೇರಿದಂತೆ ಆಂಧ್ರಪ್ರದೇಶದ ಪಟಾಣ್ ಯಾರಿಸ್ ಖಾನ್(30) ಬಂಧಿತರು.

ನ. 8ರಂದು ಬಾಗೇಪಲ್ಲಿ ಎಎಸ್ಐ ನಾರಾಯಣಸ್ವಾಮಿ ಮನೆಗೆ ನುಗ್ಗಿದ ದರೋಡೆಕೋರರು ಮನೆಯಲ್ಲಿದ್ದ ಮಹಿಳೆಯರಿಗೆ ಚಾಕು ತೋರಿಸಿ ಬೆದರಿಸಿ, ಮನೆಯಲ್ಲಿದ್ದ ನಗನಾಣ್ಯ ಲೂಟಿ ಮಾಡಿದ್ದರು. ಅಡ್ಡ ಬಂದಿದ್ದ ಮನೆ ಮಾಲೀಕ ನಾರಾಯಣಸ್ವಾಮಿ ಮೇಲೆ ಹಲ್ಲೆ ನಡೆಸಿದ್ದರು. ಜೊತೆಗೆ ನಾರಾಯಣಸ್ವಾಮಿ ಪುತ್ರ ಶರತ್ ಕಾಲಿಗೆ ಗುಂಡೇಟು ಹಾರಿಸಿ ಪರಾರಿಯಾಗಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಸದ್ಯ ಮೂವರನ್ನ ಬಂಧಿಸಿದ್ದಾರೆ.

ಬಂಧಿತರಿಂದ ಮೂರು ನಾಡ ಪಿಸ್ತೂಲ್ ಗಳು, ಖಾಲಿ ಮ್ಯಾಗ್ಜಿನ್ ಹೊಂದಿರುವ ಒಂದು ಪಿಸ್ತೂಲ್, 3 ಲಕ್ಷದ 41000 ನಗದು, ಕೃತ್ಯಕ್ಕೆ ಬಳಿಸಿದ ಕಾರು, 71 ಗ್ರಾಂ ತೂಕದ ಮಾಂಗಲ್ಯ ಸರ, 21 ಬೆಳ್ಳಿಯ ಪೂಜಾ ಸಾಮಾಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.