ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿಗೆ ಸ್ಮೃತಿ ಮಂಧಾನ ಆಯ್ಕೆ…

141
firstsuddi

ನವದೆಹಲಿ : ಭಾರತ ಮಹಿಳಾ ತಂಡದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ ಅವರು 2021ರ ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 2018ರಲ್ಲೂ ಮಂಧಾನ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದರು.

ಸ್ಮೃತಿ ಮಂಧಾನ ಕಳೆದ ವರ್ಷ ಒಟ್ಟು 22 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇಷ್ಟು ಪಂದ್ಯಗಳಲ್ಲಿ ಸ್ಮೃತಿ 38.86 ಸರಾಸರಿಯಲ್ಲಿ 855 ರನ್ ಗಳಿಸಿದ್ದರು. ಈ ಅವಧಿಯಲ್ಲಿ ಅವರು ಒಂದು ಶತಕ ಮತ್ತು ಐದು ಅರ್ಧ ಶತಕಗಳನ್ನು ಬಾರಿಸಿದ್ದರು. ಅದಕ್ಕಾಗಿ ಐಸಿಸಿ ಅವರನ್ನು ರಾಚೆಲ್ ಹೇಹೋ ಫ್ಲಿಂಟ್ ಟ್ರೋಫಿಗೆ ಆಯ್ಕೆ ಮಾಡಿದೆ. ಮಂಧಾನ ಭಾರತದ ಅತ್ಯುತ್ತಮ ಬ್ಯಾಟರ್ ಗಳಲ್ಲಿ ಒಬ್ಬರಾಗಿದ್ದಾರೆ. ಅಲ್ಲದೆ ವರ್ಷದಿಂದ ವರ್ಷಕ್ಕೆ ತನ್ನ ಪ್ರದರ್ಶನದೊಂದಿಗೆ ತನ್ನ ಪ್ರಾಮುಖ್ಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ 8 ಸೀಮಿತ ಓವರ್ ಗಳ ಪಂದ್ಯದಲ್ಲಿ ಭಾರತ 2 ಪಂದ್ಯಗಳಲ್ಲಿ ಮಾತ್ರ ಜಯಿಸಿತ್ತು. ಇವೆರಡು ಗೆಲುವಿನಲ್ಲೂ ಮಂಧಾನ ಪ್ರಮುಖ ಪಾತ್ರವಿತ್ತು. ಏಕದಿನ ಪಂದ್ಯದಲ್ಲಿ 80 ರನ್ ಸಿಡಿಸಿ 158 ರನ್ ಗಳನ್ನು ಚೇಸ್ ಮಾಡಲು ನೆರವಾದರೆ, ಕೊನೆಯ ಟಿ20 ಪಂದ್ಯದಲ್ಲಿ ಅಜೇಯ 48 ರನ್ ಗಳಿಸಿ ಗೆಲ್ಲಿಸಿದ್ದರು.

ಇನ್ನು ಭಾರತ 2021ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಿದ್ದು, ಮಂಧಾನ ಇದರಲ್ಲಿ ಅಮೋಘ ಆಟ ಪ್ರದರ್ಶಿಸಿದ್ದಾರೆ. ಮೊದಲ ಇನಿಂಗ್ಸ್ ನಲ್ಲಿ 78 ರನ್ ಗಳಿಸಿದ್ದರು. ಈ ಪಂದ್ಯ ಡ್ರಾ ಆಗಿತ್ತು. ಏಕದಿನ ಸರಣಿಯಲ್ಲಿ ಭಾರತ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿತ್ತು ಮತ್ತು ಇದರಲ್ಲಿ ಮಂಧಾನ 49 ರನ್ ಗಳಿಸಿದ್ದರು. ಎರಡನೇ ಟಿ20 ಪಂದ್ಯದಲ್ಲಿ ಅವರು ಅರ್ಧಶತಕ ಗಳಿಸಿದ್ದರು.