ಒಟ್ಟಿಗೆ ಪಿಎಸ್‍ಸಿ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ತಾಯಿ-ಮಗ!

65
firstsuddi

ಕೇರಳ: ಕೇರಳ ಲೋಕಸೇವಾ ಆಯೋಗದ (ಪಿಎಸ್‍ಸಿ) ಪರೀಕ್ಷೆಯಲ್ಲಿ ತಾಯಿ ಮತ್ತು ಮಗ ಒಟ್ಟಿಗೆ ಉತ್ತೀರ್ಣರಾಗುವ ಮೂಲಕ ಗಮನ ಸೆಳೆದಿದ್ದಾರೆ. ಅರಿಕೋಡ್ ನಿವಾಸಿ ಬಿಂದು ಮತ್ತು ಅವರ ಪುತ್ರ ವಿವೇಕ್ ಈ ಅಪರೂಪದ ಸಾಧನೆ ಮಾಡಿದವರು.

ನಿನ್ನೆ ಪ್ರಕಟವಾದ ಎಲ್​ಜಿಎಸ್ ರ‍್ಯಾಂಕ್ ಪಟ್ಟಿಯಲ್ಲಿ ಬಿಂದು (ತಾಯಿ) 92ನೇ ರ‍್ಯಾಂಕ್ ಪಡೆದರೆ ವಿವೇಕ್ (ಪುತ್ರ) ಎಲ್​ಡಿಸಿಯಿಂದ 38ನೇ ರ‍್ಯಾಂಕ್ ಗಳಿಸಿದ್ದಾರೆ. ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂಬ ಆಸೆಯೊಂದಿಗೆ ತಾಯಿ-ಮಗ ಇಬ್ಬರೂ ಒಟ್ಟಿಗೆ ಖಾಸಗಿ ಕೋಚಿಂಗ್ ಸೆಂಟರ್‌ನಲ್ಲಿ ನಿರಂತರ ಅಭ್ಯಾಸ ನಡೆಸಿದ್ದರು.

ಬಿಂದು 7 ವರ್ಷಗಳಲ್ಲಿ ಎರಡು ಬಾರಿ ಎಲ್ ಡಿಎಸ್ ಮತ್ತು ಎಲ್ ಜಿಎಸ್ ಪರೀಕ್ಷೆ ಬರೆದಿದ್ದರು. ಕಳೆದ ಎಲ್ ಜಿಎಸ್ ಪರೀಕ್ಷೆಯ ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. 11 ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು 2019-20ನೇ ಸಾಲಿನ ಅತ್ಯುತ್ತಮ ಅಂಗನವಾಡಿ ಶಿಕ್ಷಕಿಯಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.

ಬಿಂದು ಅವರ ಪತಿ ಚಂದ್ರನ್ ಅವರು ಎಡಪಾಲ ಕೆಎಸ್ ಆರ್ ಟಿಸಿ ಡಿಪೋ ಉದ್ಯೋಗಿ. ಈ ದಂಪತಿಗೆ ಹೃದ್ಯ ಎಂಬ ಮಗಳೂ ಇದ್ದಾರೆ. ಕೋಚಿಂಗ್ ಸೆಂಟರ್ ಗೆ ಹೋದರೂ ಸಹ ಬಿಂದು ಅವರು ಬಿಡುವಿನ ವೇಳೆಯನ್ನೆಲ್ಲ ಅಧ್ಯಯನಕ್ಕೆ ಮೀಸಲಿಟ್ಟಿದ್ದರು. ಸರ್ಕಾರಿ ನೌಕರಿ ಪಡೆಯುವ ಕನಸು ಇದಕ್ಕೆ ಕಾರಣವಾಯಿತು ಎನ್ನುತ್ತಾರೆ ಬಿಂದು.

ತನ್ನ ಯಶಸ್ಸಿನ ಹಿಂದೆ ತಾಯಿಯ ಸ್ಫೂರ್ತಿ ಮತ್ತು ಪ್ರೋತ್ಸಾಹವಿದೆ. ಮೊದಲ ಪ್ರಯತ್ನದಲ್ಲೇ ರ‍್ಯಾಂಕ್ ಬಂದಿರುವುದು ತುಂಬಾ ಖುಷಿ ತಂದಿದೆ ಎಂದು ವಿವೇಕ್ ಹೇಳಿದ್ದಾರೆ. ರ‍್ಯಾಂಕ್ ಪಟ್ಟಿ ಪ್ರಕಟವಾದಾಗ ತಾಯಿ-ಮಗ ಇಬ್ಬರೂ ಪಿಎಸ್ಸಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಕುಟುಂಬಕ್ಕೆ ದುಪ್ಪಟ್ಟು ಸಂತೋಷವಾಗಿದೆ.

ಪರೀಕ್ಷಾ ಆಕಾಂಕ್ಷಿಗಳು ಹೇಗಿರಬೇಕು ಎಂಬುದಕ್ಕೆ ಈ ತಾಯಿ-ಮಗನೇ ಅತ್ಯುತ್ತಮ ಉದಾಹರಣೆ ಎಂದು ನೆಟಿಜನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.