‘ಒಬ್ಬ ವ್ಯಕ್ತಿ ಒಂದು ಹುದ್ದೆ’ ನೀತಿ ಬೆಂಬಲಿಸಿದ ರಾಹುಲ್ ಗಾಂಧಿ.

67
firstsuddi

ಕೊಚ್ಚಿ (ಕೇರಳ) : ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಮಾತ್ರ ಸಿಗಲಿದೆ ಎಂಬ ನೀತಿಯನ್ನು ರಾಹುಲ್ ಗಾಂಧಿ ಬೆಂಬಲಿಸಿದ್ದಾರೆ. ಇದರಿಂದ, ಎರಡು ಹುದ್ದೆಗಳನ್ನು ವಹಿಸಿಕೊಳ್ಳುವ ಪಕ್ಷದ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವ ಅಶೋಕ್ ಗೆಹ್ಲೋಟ್ ಅವರಿಗೆ ತೀವ್ರ ಹಿನ್ನಡೆಯಾಗಿದೆ.

ಭಾರತ್ ಜೋಡೋ ಯಾತ್ರೆ ಭಾಗವಾಗಿ ಕೇರಳದ ಕೊಚ್ಚಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷ ಹುದ್ದೆಯು ಭಾರತದ ನಿರ್ದಿಷ್ಟ ದೃಷ್ಟಿಕೋನವನ್ನು ವ್ಯಾಖ್ಯಾನಿಸುವ ಐತಿಹಾಸಿಕ ಸ್ಥಾನ. ಅಲ್ಲದೇ, ಅದು ಒಂದು ಸೈದ್ಧಾಂತಿಕ ಹುದ್ದೆ. ಜೊತೆಗೆ ಒಂದು ನಂಬಿಕೆ ವ್ಯವಸ್ಥೆ ಮತ್ತು ಭಾರತದ ದೃಷ್ಟಿಕೋನ. ಅದರ ಆಲೋಚನೆಗಳನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಪ್ರತಿನಿಧಿಸುತ್ತದೆ ಎಂದರು.

ಕಾಂಗ್ರೆಸ್ ಅಧ್ಯಕ್ಷರಾಗಿ ಯಾರೇ ಆಯ್ಕೆಯಾದರೂ, ತಾವು ಒಂದು ಆಲೋಚನೆಗಳ ಗುಂಪು, ಒಂದು ನಂಬಿಕೆ ವ್ಯವಸ್ಥೆ ಮತ್ತು ಭಾರತದ ದೃಷ್ಟಿಕೋನವನ್ನು ಪ್ರತಿನಿಧಿಸುತ್ತಿದ್ದೇವೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಇದೇ ಕೇರಳ – ಉದಯಪುರದಲ್ಲಿ ನಾವು ನಿರ್ಧರಿಸಿರುವ ಒಬ್ಬ ವ್ಯಕ್ತಿ, ಒಂದು ಹುದ್ದೆ ಎಂಬುವುದು ಕಾಂಗ್ರೆಸ್ ನ ಬದ್ಧತೆ. ಆ ಬದ್ಧತೆಯನ್ನು ಪಕ್ಷದ ಅಧ್ಯಕ್ಷ ಸ್ಥಾನದ ವಿಷಯದಲ್ಲೂ ಉಳಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ರಾಹುಲ್ ಗಾಂಧಿ ತಿಳಿಸಿದರು.