ಕರ್ತವ್ಯ ಲೋಪ – ಸಕಲೇಶಪುರ ವಲಯ ಅರಣ್ಯಾಧಿಕಾರಿ ಶಿಲ್ಪಾ ಅಮಾನತು…

77
firstsuddi

ಹಾಸನ: ಕರ್ತವ್ಯ ಲೋಪ ಹಿನ್ನೆಲೆ ಹಾಸನ ಜಿಲ್ಲೆಯ ಸಕಲೇಶಪುರ ವಲಯ ಅರಣ್ಯಾಧಿಕಾರಿ ಶಿಲ್ಪಾ ಎಸ್.ಎಲ್ ಅವರನ್ನು ಅಮಾನತುಗೊಳಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜ್ ಕಿಶೋರ್ ಸಿಂಗ್ ಆದೇಶ ಹೊರಡಿಸಿದ್ದಾರೆ.

ಸಿಬ್ಬಂದಿಯನ್ನು ನಿಯಂತ್ರಿಸುವಲ್ಲಿ, ಅರಣ್ಯ ಅಪರಾಧ ಪ್ರಕರಣಗಳ ತನಿಖೆ ನಡೆಸುವಲ್ಲಿ ವಿಫಲವಾಗಿರುವುದು, ಅವರಿಗೆ ನೀಡಿದ ಭೌತಿಕ ಹಾಗೂ ಆರ್ಥಿಕ ಪ್ರಗತಿಯನ್ನು ಸಾಧಿಸುವಲ್ಲಿ ವೈಫಲ್ಯ, ಸಾರ್ವಜನಿಕರೊಂದಿಗೆ ಸಮನ್ವಯ ಸಾಧಿಸಿಕೊಂಡು ಆನೆ ಮಾನವ ಸಂಘರ್ಷ ನಿಯಂತ್ರಿಸುವಲ್ಲಿ ವಿಫಲವಾಗಿರುವುದು, ಅಧಿಕಾರಿ, ಸಿಬ್ಬಂದಿ ವರ್ಗದವರ ನಡುವೆ ಭಿನ್ನಾಭಿಪ್ರಾಯ ಉಂಟಾಗಲು ಹಾಗೂ ವಿಭಾಗದ ಮತ್ತು ವಲಯದ ಆಡಳಿತಾತ್ಮಕ ತೊಡಕು ಉಂಟಾಗಲು ನೇರ ಕಾರಣಕರ್ತರಾಗಿದ್ದಾರೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಮೇಲಾಧಿಕಾರಿಗಳ ಯಾವುದೇ ಸೂಚನೆ ಹಾಗೂ ಆದೇಶ ಪತ್ರಗಳಿಗೆ ಹೇಗೆ ಉತ್ತರಿಸಬೇಕು ಎಂಬ ತಮ್ಮ ಕಾರ್ಯಶೈಲಿಯನ್ನು ತಿದ್ದುಕೊಂಡಿಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಮವಸ್ತ್ರಧಾರಿ ಅಧಿಕಾರಿಯವರು ಆಡಳಿತಾತ್ಮಕ ಗಂಭೀರ ವಿಷಯಗಳ ಬಗ್ಗೆ ಗಮನ ಹರಿಸದೇ ಸರ್ಕಾರಿ ಸ್ವತ್ತನ್ನು ರಕ್ಷಣೆ ಮಾಡುವಲ್ಲಿ ವಿಫಲರಾಗಿರುವುದರ ಜೊತೆಗೆ ಆರ್ಥಿಕ ನಷ್ಟ ಉಂಟು ಮಾಡಿದ್ದು, ಕೇಂದ್ರ ಸ್ಥಾನದಲ್ಲಿದ್ದಲ್ಲಿ ಈ ಕರ್ತವ್ಯ ಲೋಪಗಳಿಗೆ ಸಂಬಂಧಿಸಿದ ಪೂರಕ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇದೆಯೆಂದು ಉಲ್ಲೇಖಿಸಿ ಹಾಗೂ ಪೂರಕ ಸರ್ಕಾರಿ ಪರ ಸಾಕ್ಷ್ಯಗಳಿಗೆ ಬೆದರಿಕೆ ಒಡ್ಡುವ ಸಾಧ್ಯತೆ ಬಗ್ಗೆಯು ಆರೋಪವಿದ್ದು ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ, ಕರ್ತವ್ಯದಿಂದ  ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.