ಜೆಡಿಎಸ್-ಶಾಸಕ ಶ್ರೀನಿವಾಸ್ ಬೆಂಬಲಿಗರ ನಡುವೆ ವಾಕ್ಸಮರ – 10 ಮಂದಿ ವಿರುದ್ಧ ಎಫ್ಐಆರ್…

59
firstsuddi

ತುಮಕೂರು : ವಿಧಾನಸಭಾ ಕ್ಷೇತ್ರದ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಕೆಸರೆರಚಾಟ ಹೆಚ್ಚಾಗುತ್ತಿದೆ.

ಜೆಡಿಎಸ್​​ನಿಂದ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಉಚ್ಚಾಟನೆಗೊಂಡ ನಂತರ ಸಾಮಾಜಿಕ ಜಾಲತಾಣದಲ್ಲಿ ಶಾಸಕರ ಬೆಂಬಲಿಗರು ಮತ್ತು ಜೆಡಿಎಸ್ ಬೆಂಬಲಿಗರ ನಡುವೆ ವಾಕ್ಸಮರ ಮುಂದುವರಿದಿದೆ. ಉಭಯ ಬೆಂಬಲಿಗರ ನಡುವೆ ಪರಸ್ಪರ ನಿಂದನೆ ಆರೋಪ ಸಂಬಂಧ ಠಾಣೆಯಲ್ಲಿ 10 ಜನರ ಮೇಲೆ ಎಫ್ಐಆರ್ ದಾಖಲಾಗಿದೆ. ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಮೂವರು ಬೆಂಬಲಿಗರು ಹಾಗೂ ಜೆಡಿಎಸ್ ನ 7 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಸಮ್ಮಿಶ್ರ ಸರ್ಕಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಆರಂಭಗೊಂಡ ಕುಮಾರಸ್ವಾಮಿ ಮತ್ತು ಶ್ರೀನಿವಾಸ್ ಮುನಿಸು ಇದೀಗ ಈ ಹಂತಕ್ಕೆ ಬಂದು ತಲುಪಿದೆ. ಜೆಡಿಎಸ್ ಜೊತೆ ಮುನಿಸಿಕೊಂಡಿದ್ದ ಶ್ರೀನಿವಾಸ್, ರಾಜ್ಯಸಭೆಯಲ್ಲಿ ಅಡ್ಡಮತ ಚಲಾಯಿಸಿದ್ದರು.

ಬಿಜೆಪಿಗೆ ಅಡ್ಡಮತದಾನ ಮಾಡಿರುವುದನ್ನು ಶ್ರೀನಿವಾಸ್ ಅವರು ರೇವಣ್ಣ ಅವರಿಗೆ ತೋರಿಸಿದ್ದರು. ಈ ಬೆಳವಣಿಗೆ ನಂತರ ಶ್ರೀನಿವಾಸ್ ಅವರು ಜೆಡಿಎಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೇ ಹೆಚ್.ಡಿ ಕುಮಾರಸ್ವಾಮಿ ಸೇರಿದಂತೆ ಕಾರ್ಯಕರ್ತರು ಶ್ರೀನಿವಾಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಶ್ರೀನಿವಾಸ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು.