ಕರ್ನಾಟಕದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ : ರಾಹುಲ್ ಗಾಂಧಿ.

76
firstsuddi

ಬೆಂಗಳೂರು : ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ರಾಜ್ಯಾದ್ಯಂತ 2 ದಿನಗಳ ಕಾಲ ಪ್ರವಾಸ ಕೈಗೊಂಡಿದ್ದಾರೆ. ಇಂದು ನಗರ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಿದ ಅವರು, ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕ ನೈಜವಾಗಿ ಕಾಂಗ್ರೆಸ್ ರಾಜ್ಯವಾಗಿದೆ. ಈಗ ಇಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಹಿಂದೆ ನರೇಂದ್ರ ಮೋದಿ ಮೊದಲು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದರು. ಆದರೆ, ಇಲ್ಲಿ ದೇಶದಲ್ಲೇ ದೊಡ್ಡ ಭ್ರಷ್ಟ ಸರ್ಕಾರ ಇದೆ. 40% ಸರ್ಕಾರ ಇದೆ. ವೇದಿಕೆ ಮೇಲೆ ಭ್ರಷ್ಟಾಚಾರದ ಮಾತನ್ನಾಡಿದರೆ ಜನ ನಗುತ್ತಾರೆ . ಬಿಜೆಪಿ ಭ್ರಷ್ಟಾಚಾರ, ಬೆಲೆ ಏರಿಕೆ, ಜನಪರ ವಿಚಾರಗಳ ಮಾತನಾಡುವ ಶಕ್ತಿ ಹೊಂದಿಲ್ಲ. ಧರ್ಮ, ಜಾತಿಗಳ ನಡುವೆ ಗಲಾಟೆ ತಂದಿಟ್ಟು ಲಾಭ ಪಡೆಯಲು ಯತ್ನಿಸುತ್ತಿದೆ. ಈ ಸಂದರ್ಭ ನಮ್ಮ ಜವಾಬ್ದಾರಿ ಅರಿಯಬೇಕಿದೆ. ಒಡೆಯುವುದು ಅವರ ಕಾರ್ಯ, ನಾವು ಜೋಡಿಸುವ ಕಾರ್ಯ ಮಾಡಬೇಕು ಎಂದರು.

ಜನರಿಗೆ ಉದ್ಯೋಗ ಇಲ್ಲ. ನಿರುದ್ಯೋಗ ಸಮಸ್ಯೆಯಿಂದ ದೇಶದ ಅರ್ಥವ್ಯವಸ್ಥೆ ದುರ್ಬಲವಾಗಿದೆ. ಯಾವುದೇ ಉದ್ಯಮಿ ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ. ಮುಂದೆ ಸಹ ಇವರು ದುರ್ಬಲವಾಗುತ್ತಾ ಸಾಗುತ್ತಾರೆ. ನಾವು ಈಗಲೇ ಅಭ್ಯರ್ಥಿ ಆಯ್ಕೆಗೆ ನಿಯಮಾವಳಿ ರೂಪಿಸಿಕೊಳ್ಳಬೇಕು. ಬದ್ಧತೆ, ಪಕ್ಷ ಸಂಘಟನೆಗೆ ಕಾರ್ಯ ಕೈಗೊಳ್ಳುವವರಿಗೆ ಅವಕಾಶ ನೀಡಬೇಕು. 150ಕ್ಕಿಂತ ಒಂದು ಸ್ಥಾನ ಸಹ ಕಡಿಮೆ ಬಾರದಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.