ಕಲ್ಲಿದ್ದಲು ಹಗರಣ : ಛತ್ತೀಸ್‍ಗಢದ ಕಾಂಗ್ರೆಸ್ ನಾಯಕರಿಗೆ ಇಡಿ ಶಾಕ್…

76
firstsuddi

ನವದೆಹಲಿ: ಛತ್ತೀಸ್ ಗಢದ ಕಾಂಗ್ರೆಸ್ ನಾಯಕರಿಗೆ ಜಾರಿ ನಿರ್ದೇಶನಾಲಯ(ಇಡಿ) ಶಾಕ್ ನೀಡಿದೆ. ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಛತ್ತೀಸ್ ಗಢದ ರಾಯ್‍ಪುರದಲ್ಲಿ ಕಾಂಗ್ರೆಸ್ ನಾಯಕರಿಗೆ ಸೇರಿದ ಸ್ಥಳಗಳಲ್ಲಿ ದಾಳಿ ನಡೆಸಿದೆ.

ಅಧಿಕಾರಿಗಳ ಪ್ರಕಾರ, ದುರ್ಗ್ ಶಾಸಕ ದೇವೇಂದ್ರ ಯಾದವ್, ಛತ್ತೀಸ್ ಗಢ ಪ್ರದೇಶ ಕಾಂಗ್ರೆಸ್ ಸಮಿತಿಯ ಖಜಾಂಚಿ ರಾಮಗೋಪಾಲ್ ಅಗರವಾಲ್, ಛತ್ತೀಸ್ ಗಢ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅಧ್ಯಕ್ಷ ಸುಶೀಲ್ ಸನ್ನಿ ಅಗರವಾಲ್ ಮತ್ತು ಪಕ್ಷದ ವಕ್ತಾರ ಆರ್ ಪಿ ಸಿಂಗ್ ಅವರಿಗೆ ಸೇರಿದ ಸ್ಥಳಗಳಲ್ಲಿ ಇಂದು ಬೆಳಗ್ಗೆಯಿಂದ ಶೋಧ ನಡೆಸಲಾಗಿದೆ. ಇನ್ನು ಕೆಲವು ಆಡಳಿತ ಪಕ್ಷದ ನಾಯಕರ ಮನೆಗಳ ಮೇಲೂ ದಾಳಿ ನಡೆದಿದೆ.

ಉದ್ಯಮಿಗಳು, ದಲ್ಲಾಳಿಗಳು, ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸೇರಿಕೊಂಡು ಪ್ರತಿ ಟನ್ ಕಲ್ಲಿದ್ದಲಿಗೆ ಅಕ್ರಮವಾಗಿ 25 ರೂ.ಗಳನ್ನು ತೆರಿಗೆ ರೂಪದಲ್ಲಿ ವಸೂಲಿ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಛತ್ತೀಸ್ ಗಢದ ಕಾಂಗ್ರೆಸ್ ನ ಖಜಾಂಚಿ, ಮಾಜಿ ಉಪಾಧ್ಯಕ್ಷ ಮತ್ತು ಶಾಸಕ ಸೇರಿದಂತೆ ಅನೇಕರ ಮನೆ ಮೇಲೆ ಇಡಿ ದಾಳಿ ನಡೆಸಿದೆ ಎಂದು ಛತ್ತಿಸ್ ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಟ್ವೀಟ್ ಮಾಡಿದ್ದಾರೆ.

ನಾಲ್ಕು ದಿನಗಳ ನಂತರ ರಾಯ್ ಪುರದಲ್ಲಿ ಕಾಂಗ್ರೆಸ್ ನ ಸರ್ವಸದಸ್ಯರ ಅಧಿವೇಶನವಿದೆ. ಇಂತಹ ಕೃತ್ಯಗಳ ಮೂಲಕ ಅಧಿವೇಶನದ ಸಿದ್ಧತೆಯಲ್ಲಿ ತೊಡಗಿರುವ ನಮ್ಮ ಸಹೋದ್ಯೋಗಿಗಳನ್ನು ನಿಲ್ಲಿಸುವುದರಿಂದ ನಮ್ಮ ಉತ್ಸಾಹವನ್ನು ಮುರಿಯಲು ಸಾಧ್ಯವಿಲ್ಲ. ಭಾರತ್ ಜೋಡೋ ಯಾತ್ರೆಯ ಯಶಸ್ಸಿನಿಂದ ಬಿಜೆಪಿಗೆ ನಿರಾಸೆಯಾಗಿದೆ. ಅದಾನಿಯ ನಿಜ ಸಂಗತಿ ಬಯಲಿಗೆಳೆದಿದ್ದಾರೆ. ಈ ದಾಳಿ ಗಮನ ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ. ದೇಶಕ್ಕೆ ಸತ್ಯ ತಿಳಿದಿದೆ, ನಾವು ಹೋರಾಡುತ್ತೇವೆ ಮತ್ತು ಗೆಲ್ಲುತ್ತೇವೆ ಎಂದು ಸಿಎಂ ಹೇಳಿದ್ದಾರೆ.