ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ : ಶಶಿ ತರೂರ್, ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ…

53
firstsuddi

ನವದೆಹಲಿ : ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ಕಾಂಗ್ರೆಸ್ ನಾಯಕ ಶಶಿ ತರೂರ್ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಎಐಸಿಸಿ ಕಚೇರಿಗೆ ತಮ್ಮ ಬೆಂಬಲಿಗ ನಾಯಕರೊಂದಿಗೆ ಆಗಮಿಸಿದ ಶಶಿ ತರೂರ್ ಅವರು ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.

ನಾನು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗಿ ಈಗಷ್ಟೇ ನಾಮಪತ್ರ ಸಲ್ಲಿಸಿದ್ದೇನೆ. ಭಾರತದ ಏಕೈಕ ಪಕ್ಷಕ್ಕೆ ತನ್ನ ನಾಯಕನನ್ನು ಆಯ್ಕೆ ಮಾಡಲು ಮುಕ್ತ ಪ್ರಜಾಸತ್ತಾತ್ಮಕ ಪ್ರಕ್ರಿಯೆಯೊಂದಿಗೆ ಸೇವೆ ಸಲ್ಲಿಸುವುದು ಒಂದು ವಿಶೇಷವಾಗಿದೆ. ಸೋನಿಯಾ ಅವರ ಮಾರ್ಗದರ್ಶನ ಮತ್ತು ದೂರದೃಷ್ಟಿಯನ್ನು ಬಹಳವಾಗಿ ಪ್ರಶಂಸಿಸುತ್ತೇನೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಅದೇ ರೀತಿ, ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ರಾಜಸ್ಥಾನ ಸಿಎಂ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಹಾಗೂ ಪಕ್ಷದ ಮತ್ತೋರ್ವ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅಧ್ಯಕ್ಷ ಹುದ್ದೆ ಚುನಾವಣಾ ರೇಸ್ ನಿಂದ ಹಿಂದೆ ಸರಿದಿರುವುದು ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷ ಗಾದಿ ಹಾದಿ ಸುಗಮವಾದಂತಾಗಿದೆ.

ಕಾಂಗ್ರೆಸ್ ಪಕ್ಷದ 30 ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರ ಉಮೇದುವಾರಿಕೆಗೆ ಬೆಂಬಲ ಸೂಚಿಸಿದ್ದಾರೆ. ಎ.ಕೆ ಆಂಟನಿ, ಅಶೋಕ್ ಗೆಹ್ಲೋಟ್, ಅಂಬಿಕಾ ಸೋನಿ,ಮುಕುಲ್ ವಾಸ್ನಿಕ್, ಆನಂದ್ ಶರ್ಮಾ, ಅಭಿಷೇಕ್ ಸಿಂಘ್ವಿ, ಅಜಯ್ ಮಾಕೇನ್, ಭುಪಿಂದರ್ ಎಸ್ ಹೂಡ,ದಿಗ್ವಿಜಯ್ ಸಿಂಗ್ , ತಾರೀಖ್ ಅಲ್ವರ್ ಖರ್ಗೆ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಈ ವೇಳೆ ಮಾತನಾಡಿದ ಖರ್ಗೆ, ಇಂದು ನನ್ನ ಬೆಂಬಲಕ್ಕೆ ಬಂದ ಎಲ್ಲಾ ನಾಯಕರು, ಕಾರ್ಯಕರ್ತರು, ಪ್ರತಿನಿಧಿಗಳು ಮತ್ತು ಸಚಿವರಿಗೆ ನನ್ನ ವಂದನೆಗಳು. ಎಲ್ಲ ನಾಯಕರೂ ನನ್ನನ್ನು ಪ್ರೋತ್ಸಾಹಿಸಿದರು, ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅಕ್ಟೋಬರ್ 17 ರಂದು ಫಲಿತಾಂಶಗಳು ಏನೆಂದು ನಾವು ಎದುರು ನೋಡುತ್ತೇವೆ. ನಾನು ಗೆಲ್ಲುವ ಭರವಸೆ ಇದೆ. ನಾನು ಬಾಲ್ಯದಿಂದಲೂ ಕಾಂಗ್ರೆಸ್ ಸಿದ್ಧಾಂತದೊಂದಿಗೆ ಸಂಪರ್ಕ ಹೊಂದಿದ್ದೇನೆ ಎಂದು ಹೇಳಿದರು.