ರಾಮನಗರ : ಕಾಂಗ್ರೆಸ್ ಮುಖಂಡನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಬಿಡದಿ ಹೋಬಳಿ ಬಾನಂದೂರು ಗ್ರಾಮದ ನಿವಾಸಿಯಾದ ಗಂಟಪ್ಪ ಕೊಲೆಯಾದ ದುರ್ದೈವಿ. ಗಂಟಪ್ಪ ಅವರು ಭೈರವನದೊಡ್ಡಿ ಸಮೀಪ ಇರುವ ತಮ್ಮ ತೋಟದಲ್ಲಿ ಬೈಕ್ ಸರ್ವೀಸ್ ಸ್ಟೇಷನ್ ನಡೆಸುತ್ತಿದ್ದು, ರಾತ್ರಿ ಅಲ್ಲಿಯೇ ಇದ್ದರು. ಈ ವೇಳೆ ದುಷ್ಕರ್ಮಿಗಳು ಹೊಟ್ಟೆ ಹಾಗೂ ಕುತ್ತಿಗೆಗೆ ಡ್ರ್ಯಾಗನ್‍ನಿಂದ ಚುಚ್ಚಿ ಹತ್ಯೆ ಮಾಡಿ ಪರಾರಿ ಆಗಿದ್ದಾರೆ.
ಈ ಘಟನೆ ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ. ಸದ್ಯ ಕೊಲೆಯಾದ ಗಂಟಪ್ಪ ಅವರ ಮೃತದೇಹವನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಜಮೀನು ವಿವಾದಕ್ಕೆ ಕೊಲೆ ಮಾಡಿರುವ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಬಿಡದಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.










