ಕಾಬೂಲ್(ಅಫ್ಘಾನಿಸ್ತಾನ) : ಅಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನ್ ಉಗ್ರರ ಹಿಡಿತದಲ್ಲಿದೆ. ಅಲ್ಲಿನ ಸದ್ಯದ ಪರಿಸ್ಥಿತಿ ಹೇಳತೀರದಾಗಿದೆ. ಲಕ್ಷಾಂತರ ಜನರು ತಮ್ಮ ಪ್ರಾಣ ರಕ್ಷಣೆಗೆ ಇನ್ನಿಲ್ಲದ ಕರಸತ್ತು ನಡೆಸುತ್ತಿದ್ದಾರೆ. ಸ್ವದೇಶ ಬಿಟ್ಟು ವಿವಿಧ ಸುರಕ್ಷಿತ ಸ್ಥಳಗಳಿಗೆ ತೆರಳಲು ಮುಂದಾಗಿರುವ ಅಲ್ಲಿನ ಪ್ರಜೆಗಳು ಕಾಬೂಲ್ ಏರ್ ಪೋರ್ಟ್ ಗೆ ಧಾವಿಸಿ ಬರುತ್ತಿದ್ದಾರೆ. ಈ ವೇಳೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿಯೂ ನಡೆದಿದೆ. ಪರಿಣಾಮ, ಐವರು ಅಸುನೀಗಿದ್ದಾರೆ ಎನ್ನಲಾಗುತ್ತಿದೆ.
ಇನ್ನೂ ಕಾಬೂಲ್ ನಗರ ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆ ಏರ್ ಪೋರ್ಟ್ ಗೆ ಲಗ್ಗೆ ಹಾಕಿ, ಗುಂಡಿನ ದಾಳಿ ನಡೆಸಿರುವ ಉಗ್ರರು ಈಗಾಗಲೇ ಕಾಬೂಲ್ ವಿಮಾನ ನಿಲ್ದಾಣವನ್ನು ತಮ್ಮ ಹತೋಟಿಗೆ ತೆಗೆದುಕೊಂಡಿದ್ದಾರೆ. ಇದರ ಜೊತೆಗೆ ಏರ್ ಬೇಸ್ ಕೂಡ ಬಂದ್ ಮಾಡಿದ್ದಾರೆ. ಅಫ್ಘಾನಿಸ್ತಾನದಿಂದ ಹೊರಹೋಗಲು ಸದ್ಯ ಕಾಬೂಲ್ ಏರ್ ಪೋರ್ಟ್ ವೊಂದೇ ಮಾರ್ಗವಾಗಿದೆ.










