ಧಾರವಾಡ : ಕಾರ್ತಿಕ ಮಾಸದಲ್ಲಿ ತೊಂದರೆಯಾಗುವ ಲಕ್ಷಣವಿದೆ. ಮಳೆಯಿಂದ, ರೋಗದಿಂದ ಹಾಗೂ ಭೂಮಿಯಿಂದ ತೊಂದರೆಯಾಗುತ್ತದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಹೊರಗಡೆ ಹೋಗುವಾಗ ಕೈಯಲ್ಲಿ ಬಡಿಗೆ ಹಿಡಿದುಕೊಂಡು ಹೋಗುವುದು ಒಳ್ಳೆಯದು. ಅದು ಸಂರಕ್ಷಣೆಯಾಗುತ್ತದೆ. ಆಶ್ವಿಜ ಕೊನೆಯಿಂದ ಯುಗಾದಿ ಕೊನೆಯವರೆಗೂ ಅಂಗಾಂಗ ಕಾಯಿಲೆಗಳು ಹೆಚ್ಚಾಗುತ್ತವೆ. ಮೂರು ತಿಂಗಳಲ್ಲಿ ಈ ಕಾಯಿಲೆ ಹೆಚ್ಚಾಗಲಿದೆ. ಪ್ರಾರಂಭದಲ್ಲೇ ನಾನು ಮಳೆ, ಗಾಳಿ, ಗುಡುಗು ಇದೆ ಎಂದು ಹೇಳಿದ್ದೆ. ಬೆಂಕಿಯಿಂದ ಕಾಟ, ಮತಾಂಧತೆ ಹೆಚ್ಚಳ, ಸಾವು-ನೋವುಗಳಾಗುತ್ತವೆ. ಜನ ಅಶಾಂತಿಯಿಂದ ಇರುತ್ತಾರೆ. ಭೂಮಿ ನಡುಗುತ್ತದೆ, ಕುಸಿಯುತ್ತದೆ, ರೋಗ ಹೆಚ್ಚಾಗುತ್ತವೆ ಎಂದು ಹೇಳಿದ್ದೆ. ಅದರಂತೆ ಇನ್ನೂ ಮುಂದೆ ಮಳೆಯಾಗುವ ಲಕ್ಷಣ ಇದೆ ಎಂದರು.
ಕಾಡಿನಿಂದ ನಾಡಿಗೆ ಪ್ರಾಣಿಗಳು ಹೆಚ್ಚಾಗಿ ಬರುತ್ತವೆ. ಭೂಮಿಯೊಳಗಿನ ವಿಷಜಂತುಗಳು ಹೊರಗೆ ಬಂದು ತೊಂದರೆ ಮಾಡುತ್ತವೆ. ಪ್ರಕೃತಿಯಿಂದ ಅಲ್ಲೊಲ ಕಲ್ಲೋಲ ಆಗುತ್ತದೆ. ರಾಜ್ಯಕ್ಕೆ ಒಂದು ಅವಘಡ ಆಗಲಿದೆ. ಅದು ಸಹ ಕಾದು ನೋಡಿ. ಬೆಂಕಿಯಿಂದ ಹೆಚ್ಚು ಸಮಸ್ಯೆ ಇದೆ. ಅಪಮೃತ್ಯು ಹೆಚ್ಚಿದೆ. ಅಶಾಂತಿಯಾಗಿ ಕಲಹಗಳು ಹೆಚ್ಚಾಗುತ್ತವೆ. ಒಂದೆಡೆ ಪ್ರಕೃತಿ ವಿಕೋಪ, ಮತಾಂಧತೆ ಹೆಚ್ಚಾಗಿ ಅಶಾಂತಿ, ಕಲಹಗಳು ಹೆಚ್ಚಾಗಿ ಜನಮನವನ್ನು ಶಾಂತಿ ಕದಡುವ ಕೆಲಸ ಆಗುತ್ತದೆ ಎಂದು ನುಡಿದರು.
ಇನ್ನೊಂದು ವರ್ಷದಲ್ಲಿ ಕೊರೊನಾ ಹೋಗುತ್ತದೆ. ಬಳ್ಳಾರಿಯಲ್ಲಿ ಈ ಬಗ್ಗೆ ಹೇಳಿದ್ದೆ. ಹೋಗುವಾಗ ಜಗತ್ತಿಗೆ ವಿಪರೀತ ಕ್ಷಾಮ ಕೊಟ್ಟು ಹೋಗುತ್ತದೆ. ದುಃಖ ಕೊಟ್ಟು ಹೋಗುತ್ತದೆ, ಕುಡಿಯಲು ನೀರು ಇಲ್ಲದಂತೆ ಮಾಡುತ್ತದೆ. ಅಂತಹ ಪ್ರಸಂಗ ಇದೆ. ಭವಿಷ್ಯದಲ್ಲಿ ಜಗತ್ತಿನ ಇತಿಹಾಸದಲ್ಲೇ ಇಂತಹ ರೋಗ ಬಂದಿಲ್ಲ. ಜನ ಕಷ್ಟ ಬಂದಾಗ ಮಾತ್ರ ದೇವರು, ಮಠ ಮಂದಿರ ಎನ್ನುತ್ತಾರೆ. ಆದರೆ ಈ ಕೊರೊನಾ ಮೊದಲು ಬಂದಿದ್ದೇ ದೇವರ ಮೇಲೆ. ಮೊದಲು ಮಠ, ಮಾನ್ಯಗಳ ಮೇಲೆ ಬಂತು ಆ ಮೇಲೆ ಮನುಷ್ಯರ ಮೇಲೆ ಬಂತು. ಜನವರಿವರೆಗೂ ಕೊರೊನಾ ಹೆಚ್ಚು ಹರಡುವ ಕಾಲವಿದೆ. ಇದು ಮತ್ತೊಂದು ರೂಪವಾಗುವ ಲಕ್ಷಣವೂ ಇದೆ ಎಂದರು.










