ಕಾರ್ಮಿಕರ ಮೇಲೆ ಹಲ್ಲೆ ಖಂಡನೀಯ: ಎಂ.ಬಿ ಪಾಟೀಲ್.

40

ವಿಜಯಪುರ: ಕೆಲಸಕ್ಕೆ ಬರುವುದಿಲ್ಲ ಎಂದ ಕಾರ್ಮಿಕರಿಗೆ ಹಿಗ್ಗಾ ಮುಗ್ಗಾ ಥಳಿಸಿದ ದಾರುಣ ಘಟನೆ ವಿಜಯಪುರದ ಗಾಂಧಿನಗರದ ಇಟ್ಟಂಗಿ ಭಟ್ಟಿಯಲ್ಲಿ ನಡೆದಿತ್ತು. ಬಾಗಲಕೋಟೆ ಜಿಲ್ಲೆಯ ಚಿಕ್ಕಲಗಿ ಗ್ರಾಮದ ನಿವಾಸಿಗಳಾದ ಉಮೇಶ ಮಾದರ, ಸದಾಶಿವ ಬಬಲಾದಿ, ಸದಾಶಿವ ಮಾದರ, ಎಂಬ ಕಾರ್ಮಿಕರ ಮೇಲೆ ಖೇಮು ರಾಠೋಡ ಹಾಗೂ ಸಂಬಂಧಿಕರು ಮನ ಬಂದಂತೆ ಹಲ್ಲೆ ನಡೆಸಿದ್ದರು. ಸದ್ಯ ಕಾರ್ಮಿಕರು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ, ಆರೋಪಿಗಳ ಬಂಧನಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾರ್ಮಿಕರ ಮೇಲೆ ಹಲ್ಲೆ ಖಂಡನೀಯ, ಈ ಬಗ್ಗೆ ಎಸ್‍ಪಿ ಜೊತೆ ಸಂಪರ್ಕದಲ್ಲಿದ್ದೇನೆ. ಪೊಲೀಸರಿಂದ ನಾನು ವರದಿ ಪಡೆದಿದ್ದೇನೆ. ಈಗಾಗಲೇ ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ. ಎಪಿಎಂಸಿ ವ್ಯಾಪ್ತಿಯ ತಾಂಡಾದಲ್ಲಿ ಈ ಘಟನೆ ನಡೆದಿದೆ. ಮೂರು ಜನರು ದಲಿತ ಸಮುದಾಯಕ್ಕೆ ಸೇರಿದವರು. ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಜರುಗಿಸುತ್ತೇವೆ. ಈ ಬಗ್ಗೆ ಜಿಲ್ಲಾಧಿಕಾರಿಯ ಜೊತೆಗೂ ಮಾತನಾಡಿದ್ದೇನೆ. ಮಾಲೀಕ ಖೇಮು ರಾಠೋಡ ಕಾಂಪ್ರಮೈಸ್‍ಗೂ ಯತ್ನ ನಡೆಸಿದ್ದ. ಆದರೆ ಅದ್ಯಾವುದಕ್ಕೂ ಅವಕಾಶ ಕೊಡದೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.