ಉಡುಪಿ : ಬ್ರಹ್ಮಾವರ ಸಮೀಪದ ಕುಂಬ್ರಗೋಡು ಅಪಾರ್ಟ್ ಮೆಂಟ್ ನಲ್ಲಿ ಮಹಿಳೆಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ನಿನ್ನೆ ಈ ಘಟನೆ ನಡೆದಿದ್ದು, ಕೊಲೆಯಾದ ಮಹಿಳೆಯನ್ನು ಗಂಗೊಳ್ಳಿ ಮೂಲದ ವಿಶಾಲ ಗಾಣಿಗ(35) ಎಂದು ಗುರುತಿಸಲಾಗಿದೆ. ಮಹಿಳೆಯ ಕುತ್ತಿಗೆಗೆ ವೈರ್ ಬಿಗಿದು, ದಿಂಬಿನಿಂದ ಉಸಿರುಗಟ್ಟಿಸಿ ದೃಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಗಂಡ ರಾಮಕೃಷ್ಣ ಗಾಣಿಗನೊಂದಿಗೆ ವಿದೇಶದಲ್ಲಿ ವಾಸವಾಗಿದ್ದ ವಿಶಾಲ ಗಾಣಿಗ ತನ್ನ ಮಗಳೊಂದಿಗೆ ಜೂನ್ 30ರಂದು ಊರಿಗೆ ಆಗಮಿದ್ದರು. ತಂದೆ ಮನೆಯಲ್ಲಿ ಉಳಿದುಕೊಂಡಿದ್ದ ವಿಶಾಲ ಬ್ರಹ್ಮಾವರದಲ್ಲಿರುವ ಅಪಾರ್ಟ್ ಮೆಂಟ್ ಗೆ ಹೋಗಿ ಬಳಿಕ ಬ್ಯಾಂಕ್ ಕೆಲಸ ಮುಗಿಸಿಕೊಂಡು ಬರೋದಾಗಿ ಹೇಳಿ ಹೋಗಿದ್ದರು. ಆದರೆ ಸಂಜೆಯಾದ್ರೂ ಮನೆಗೆ ಬಾರದ ಮಗಳನ್ನು ಹುಡುಕಿಕೊಂಡು ಬ್ರಹ್ಮಾವರಕ್ಕೆ ತಂದೆ ಬಂದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ ವಿಶಾಲ ಅವರ ಕುತ್ತಿಗೆಯಲ್ಲಿದ್ದ ಸರ ಹಾಗೂ ಕೈಯಲ್ಲಿದ್ದ ಬಳೆ ಬಿಟ್ಟರೆ ಮನೆಯಲ್ಲಿದ್ದ ಯಾವುದೇ ಚಿನ್ನಾಭರಣ ಕಳವಾಗಿಲ್ಲ. ಅಲ್ಲದೆ ಮನೆಯಲ್ಲಿ ಕೂಡ ಚಹಾ ಮಾಡಿ ಕುಡಿದ ಕಪ್ ಗಳು ಹಾಗೆಯೇ ಇದ್ದು ಪರಿಚಿತರೇ ಮನೆಗೆ ಬಂದಿರುವುದು ಗೋಚರವಾಗುತ್ತಿದೆ. ಪೊಲೀಸರು ವಿಶಾಲ ಗಾಣಿಗ ಫೋನ್ ವಶಕ್ಕೆ ಪಡೆದಿದ್ದು ಹೆಚ್ಚಿನ ತನಿಖೆಯಿಂದ ಅಷ್ಟೇ ಪೂರ್ಣ ಸತ್ಯ ಹೊರಗಡೆ ಬರಬೇಕಾಗಿದೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.










