ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಇವುಗಳನ್ನು ತಪ್ಪದೇ ಬಳಸಿ.

118

ಆರೋಗ್ಯವಂತಹ ಕೂದಲನ್ನು ಹೊಂದುವುದು ಪ್ರತಿಯೊಬ್ಬ ಮಹಿಳೆಯ ಕನಸಾಗಿದೆ. ಹಾಗಾಗಿ ಕೆಲವು ಮಹಿಳೆಯರು ಕೂದಲಿನ ಕಾಳಜಿಗೆ ಹೆಚ್ಚು ನಿಗಾವಹಿಸುತ್ತಾರೆ. ಆದರೆ ಎಷ್ಟೇ ಆರೈಕೆ ಮಾಡಿದರೂ ಕೂದಲಿನ ಸಮಸ್ಯೆಗಳು ನಿಲ್ಲುವುದಿಲ್ಲ. ಹಾಗಾಗಿ ಕೂದಲನ್ನು ಹೆಚ್ಚು ನೈಸರ್ಗಿಕ ರೀತಿಯಲ್ಲಿ ಆರೈಕೆ ಮಾಡಬೇಕು. ಕೂದಲು ಸೊಂಪಾಗಿ ಬೆಳೆಯಲು ಪ್ರಕೃತಿಯಲ್ಲಿ ಸಿಗುವಂತಹ ಕೆಲವು ಸಸ್ಯಗಳನ್ನು ಬಳಸಿಕೊಳ್ಳಿ.
ಪ್ರಕೃತಿಯಲ್ಲಿ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವಂತಹ ಹಲವಾರು ಸಸ್ಯಗಳಿವೆ. ಇವುಗಳನ್ನು ಬಹಳ ಹಿಂದಿನ ಕಾಲದಿಂದಲೂ ನಮ್ಮ ಹಿರಿಯರು ಅವುಗಳನ್ನು ಎಣ್ಣೆಗಳು, ಹೇರ್ ಮಾಸ್ಕ್ಗಳಲ್ಲಿ ಬಳಸುತ್ತಾ ಬಂದಿದ್ದಾರೆ. ಸಸ್ಯಗಳು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವುದರ ಜೊತೆಗೆ ಕೂದಲಿನ ಸಮಸ್ಯೆಗಳನ್ನು ದೂರಮಾಡುತ್ತವೆ. ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವ ಅಂತಹ ಅದ್ಭುತ ನೈಸರ್ಗಿಕ ಸಸ್ಯಗಳ ಬಗ್ಗೆ ಮತ್ತು ಅವುಗಳನ್ನು ಕೂದಲಿನ ಆರೈಕೆಯಲ್ಲಿ ಬಳಸುವುದು ಹೇಗೆ ಎಂಬುದರ ಬಗ್ಗೆ ತಿಳಿದುಕೊಳ್ಳಿ.

 

ಅಲೋವೆರಾ: ಈ ಸಸ್ಯದಲ್ಲಿ ಪಿಎಚ್ ಮಟ್ಟವು ತುಂಬಾ ಕಡಿಮೆಯಾಗಿದೆ, ಇದು ನೆತ್ತಿಗೆ ಉತ್ತಮವಾಗಿದೆ ಮತ್ತು ಇದರಿಂದಾಗಿ ಕೂದಲಿಗೆ ಯಾವುದೇ ಹಾನಿ ಆಯುವುದಿಲ್ಲ. ಅಲೋವೆರಾ ಜೆಲ್ ಖನಿಜಗಳು, ತಾಮ್ರ ಮತ್ತು ಸತುವನ್ನು ಸಹ ಹೊಂದಿರುತ್ತದೆ ಮತ್ತು ತಲೆಹೊಟ್ಟನ್ನು ಗುಣಪಡಿಸುತ್ತದೆ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

 

ದಾಸವಾಳದ ಹೂವು: ಫ್ಲೇವನಾಯ್ಡ್ ಗಳು ಮತ್ತು ಅಮೈನೋ ಆಮ್ಲಗಳಿಂದ ಸಮೃದ್ಧವಾಗಿರುವ ದಾಸವಾಳದ ಹೂವುಗಳು ಮತ್ತು ಎಲೆಗಳು ನಿಮ್ಮ ಕೂದಲಿನ ಕಿರುಚೀಲಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತವೆ ಮತ್ತು ಹೊಸ ಕೂದಲು ಹುಟ್ಟಲು ಸಹಾಯ ಮಾಡುತ್ತವೆ.ಈ ಅಮೈನೋ ಆಮ್ಲಗಳು ಕಿರುಚೀಲದ ಕೋಶಗಳ ಸುತ್ತಲೂ ಕೆರಾಟಿನ್ ರಚನೆಯನ್ನು ಪ್ರಚೋದಿಸುವ ಮೂಲಕ ಮತ್ತು ಯುವಿಬಿ ಕಿರಣಗಳಿಂದ ನಮ್ಮ ಕೂದಲನ್ನು ರಕ್ಷಿಸುವ ಮೂಲಕ ಆರೋಗ್ಯಕರ ಕೂದಲು ಬೆಳೆಯುವಂತೆ ಮಾಡುತ್ತದೆ. ಇದು ನೆತ್ತಿಯ ಮೇಲಿನ ಹೆಚ್ಚುವರಿ ಎಣ್ಣೆಯಂಶವನ್ನು ಮತ್ತು ತಲೆಹೊಟ್ಟನ್ನು ನಿವಾರಿಸುತ್ತದೆ ಮತ್ತು ತುದಿಗಳು ಒಡೆಯುವುದನ್ನು ತಡೆಯುತ್ತದೆ. ಇದರಿಂದ ಕೂದಲಿನ ಬೆಳವಣಿಗೆಗೆ ಉತ್ತಮವಾಗಿರುತ್ತದೆ.

ನೆಲ್ಲಿಕಾಯಿ: ಕೂದಲಿನ ಆರೈಕೆಗಾಗಿ ಅತ್ಯಂತ ಉತ್ತಮವಾದ ಮತ್ತು ಜನಪ್ರಿಯ ಸಸ್ಯಗಳಲ್ಲಿ ಒಂದಾದ ಆಮ್ಲಾ ಹಲವು ರೀತಿಯ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಎಣ್ಣೆ, ಶಾಂಪೂವಿನ ಜೊತೆ ಅಥವಾ ಹಸಿಯಾಗಿ ಬಳಸಬಹುದು, ನೈಸರ್ಗಿಕ ಕಂಡೀಷನರ್ ಆಗಿ ಕೂಡ ಇದನ್ನು ಕೂದಲಿಗೆ ಹಚ್ಚಬಹುದು. ಇದರಲ್ಲಿ ವಿಟಮಿನ್ ಸಿ ಯಿಂದ ಸಮೃದ್ಧವಾಗಿದ್ದು, ಇದು ಕಾಲಜನ್ ಪ್ರೋಟೀನ್ ಅನ್ನು ಉತ್ಪಾದಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ, ಸತ್ತ ಕೋಶಗಳನ್ನು ತೆಗೆದುಹಾಕುವ ಮೂಲಕ ಕೂದಲಿನ ಕಿರುಚೀಲಗಳನ್ನು ಪುನರುತ್ಪಾದಿಸುತ್ತದೆ.

 

ಬ್ರಾಹ್ಮಿ: ಬ್ರಾಹ್ಮಿ ಸುಂದರವಾದ ಬೌನ್ಸಿ ಕೂದಲನ್ನು ಪಡೆಯಲು ಸಹಾಯ ಮಾಡುತ್ತದೆ. ನೆತ್ತಿಯ ರಕ್ತ ಪರಿಚಲನಾ ಮಟ್ಟವನ್ನು ಹೆಚ್ಚಿಸುವ ಮೂಲಕ ಕೂದಲಿಗೆ ಸಹಾಯ ಮಾಡುತ್ತದೆ. ಬ್ರಾಹ್ಮಿ ಎಲೆಗಳನ್ನು ಒಣಗಿಸಿ ಮತ್ತು ಕ್ಯಾರಿಯರ್ ಎಣ್ಣೆಯೊಂದಿಗೆ ರುಬ್ಬಿ ಇದಕ್ಕೆ ತುಳಸಿ, ಆಮ್ಲಾ ಮತ್ತು ಬೇವಿನಂತಹ ಗಿಡಮೂಲಿಕೆಗಳನ್ನು ಸಹ ಸೇರಿಸಬಹುದು.

ಈ ಎಲ್ಲಾ ಸಸ್ಯಗಳು ನಮ್ಮ ಸುತ್ತಲೂ ಸುಲಭವಾಗಿ ಸಿಗುತ್ತವೆ. ಅವುಗಳನ್ನು ಎಣ್ಣೆಯಲ್ಲಿ, ಶಾಂಪೂಗಳಲ್ಲಿ ಅಥವಾ ಹೇರ್ ಮಾಸ್ಕ್ ಗಳಲ್ಲಿ ಬಳಸಬಹುದು. ಮತ್ತು ಇತರ ನೈಸರ್ಗಿಕ ಪದಾರ್ಥಗಳೊಂದಿಗೆ ಕೂಡ ಅವುಗಳನ್ನು ಬೆರೆಸಬಹುದು. ಉತ್ತಮ ಫಲಿತಾಂಶಗಳನ್ನು ಪಡೆಯಲು ಈ ಉತ್ಪನ್ನಗಳನ್ನು ವಾರಕ್ಕೆ ಕನಿಷ್ಠ ಎರಡು ಅಥವಾ ಮೂರು ಬಾರಿ ಬಳಸಬೇಕು