ಬೆಂಗಳೂರು : ಕಾಂಗ್ರೆಸ್ ಕಾರ್ಯಕರ್ತನಿಗೆ ಹೊಡೆದಿದ್ದನ್ನು ಪ್ರಶ್ನಿಸಿರುವ ರಾಜ್ಯ ಬಿಜೆಪಿ ಸರಣಿ ಟ್ವೀಟ್ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದೆ.
ಈ ಸಂಬಂಧ ರೌಡಿ ಡಿಕೆಶಿ ಎಂಬ ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಡಿಕೆಶಿಯವರೇ, ನೀವು ರಾಜಕಾರಣಿಯೋ ಅಥವಾ ರೌಡಿಯೋ?, ಕಾರ್ಯಕರ್ತ ಹತ್ತಿರ ಬಂದ ಎಂಬ ಕಾರಣಕ್ಕೆ ಸಾರ್ವಜನಿಕವಾಗಿ ಹಲ್ಲೆ ಮಾಡುವ ಡಿಕೆಶಿ ಅವರ ಬಳಿ ಜನಸಾಮಾನ್ಯರು ಹೋದರೆ ಗತಿಯೇನು? ಕೆಪಿಸಿಸಿ ಅಧ್ಯಕ್ಷರೇ, ನೀವು ಹೊಡಿ, ಬಡಿ ರಾಜಕಾರಣದ ಬ್ರ್ಯಾಂಡ್ ಅಂಬಾಸಿಡರ್ ಆಗಲು ಹೊರಟಿದ್ದೀರಾ? ಎಂದು ಪ್ರಶ್ನಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರಿಗೆ ರೌಡಿ ಕೊತ್ವಾಲನೊಂದಿಗಿದ್ದ ಗತಕಾಲದ ನೆನಪು ಕಾಡಿತೇ? ಸಾರ್ವಜನಿಕ ಜೀವನದಲ್ಲಿದ್ದುಕೊಂಡು ಒಬ್ಬ ವ್ಯಕ್ತಿಯ ಮೇಲೆ ಸಾರ್ವಜನಿಕವಾಗಿ, ಮಾಧ್ಯಮಗಳ ಎದುರು ಹಲ್ಲೆ ಮಾಡುವುದು ಡಿಕೆಶಿ ಅವರ ಉಗ್ರ ಮನಸ್ಥಿತಿಯನ್ನು ತೋರಿಸುತ್ತಿದೆ. ಈ ಹಿಂದೆಯೂ ಸೆಲ್ಫಿ ತೆಗೆಯಲು ಬಂದ ಕಾರ್ಯಕರ್ತನ ಮೇಲೆ ಡಿಕೆಶಿ ಹಲ್ಲೆ ಮಾಡಿದ್ದರು. ಕೆಪಿಸಿಸಿ ಅಧ್ಯಕ್ಷರ ಹದ್ದು ಮೀರಿದ ವರ್ತನೆ ಇತ್ತೀಚೆಗೆ ಮಿತಿ ಮೀರುತ್ತಿದೆ. ಸಾರ್ವಜನಿಕವಾಗಿ ಹೊಡೆಯುವುದು, ಒದೆಯೋದು, ಕಾರ್ಯಕರ್ತರ ಮೊಬೈಲ್ ಅನ್ನು ಕಿತ್ತೆಸೆಯುವುದು ಇದೆಲ್ಲ ರೌಡಿ ಲಕ್ಷಣ ಅಲ್ಲದೆ ಮತ್ತೇನು? ಎಂದು ಕಿಡಿಕಾರಿದೆ.










