ಬೆಂಗಳೂರು: ನಿಫಾ ವೈರಸ್ ಪತ್ತೆಯಾಗಿ ಕೇರಳದ ಕೋಯಿಕ್ಕೋಡ್ನಲ್ಲಿ ಇಬ್ಬರು ಮೃತಪಟ್ಟ ಹಿನ್ನಲೆ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಕರ್ನಾಟಕ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ನಿಫಾ ವೈರಸ್ ಬಾವಲಿಗಳ ಮೂಲಕ ಹೆಚ್ಚಾಗಿ ಹರಡುತ್ತಿದೆ ಎನ್ನಲಾಗುತ್ತಿರುವುದರಿಂದ ಗಡಿ ಪ್ರದೇಶದಲ್ಲಿ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಬಾವಲಿಗಳು ಕಚ್ಚಿದ ಹಣ್ಣುಹಂಪಲುಗಳನ್ನು ಯಾವುದೇ ಕಾರಣಕ್ಕೂ ತಿನ್ನಬಾರದು ಎಂದು ತಿಳಿಸಲಾಗಿದೆ.
ರಾಜ್ಯದಲ್ಲಿ ನಿಫಾ ವೈರಸ್ ಆತಂಕ ಹಿನ್ನೆಲೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಆಯುಕ್ತ ರಂದೀಪ್, ಆರೋಗ್ಯ ಸೇವೆ ನಿರ್ದೇಶಕ ನವೀನ್ ಭಟ್ ಸೇರಿ ಪ್ರಮುಖ ಅಧಿಕಾರಿಗಳು ಭಾಗಿಯಾಗಿದ್ದರು. ಸಭೆ ಬಳಿಕ ಈಗ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ದಕ್ಷಿಣ ಕನ್ನಡದ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಶಂಕಿತ ಪ್ರಕರಣಗಳನ್ನು ದಾಖಲಿಸಿಕೊಂಡು, ಚಿಕಿತ್ಸೆ ನೀಡಬೇಕು ಎಂದು ಸುತ್ತೋಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚಿನ ಅಲರ್ಟ್ಗೆ ಸೂಚಿಸಿದೆ.
ಇನ್ನು ಶಂಕಿತ ಪ್ರಕರಣದ ಕುರಿತು ಜಿಲ್ಲಾ ಕಣ್ಗಾವಲು ಕಚೇರಿಗೆ ಮಾಹಿತಿ ನೀಡಬೇಕು. ನಿಫಾ ವೈರಸ್ ನಿರ್ವಹಣೆಗಾಗಿ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ 10 ಹಾಸಿಗೆಯ ವಾರ್ಡ್ ಕಾಯ್ದಿರಿಸಲು ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಮತ್ತು ಔಷಧಿಗಳನ್ನು ಒಳಗೊಂಡಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ತಿಳಿಸಲಾಗಿದೆ. ಅಗತ್ಯವಿರುವ ಔಷಧಿಗಳನ್ನು ಶೇಖರಿಸಲು ಹಾಗೂ ನಿಫಾ ರೋಗ ಲಕ್ಷಣಗಳ ಕುರಿತು ಕ್ಷೇತ್ರ ಸಿಬ್ಬಂದಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಬೇಕು. ಯಾವುದೇ ಶಂಕಿತ ಪ್ರಕರಣಗಳ ಮಾದರಿಯನ್ನು ಪುಣೆಯ ಎನ್ಐವಿ ಲ್ಯಾಬ್ ಗೆ ಕಳುಹಿಸಲು ವ್ಯವಸ್ಥೆ ಮಾಡಬೇಕು. ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಬೇಕು ಎಂದು ಸೂಚಿಸಲಾಗಿದೆ.










