ಕುಡಿಯಲು ಹಣ ನೀಡದಕ್ಕೆ ಹೆತ್ತತಾಯಿಯನ್ನೇ ಕೊಡಲಿಯಿಂದ ಹೊಡೆದು ಕೊಂದ ಪಾಪಿ ಮಗ!

44
firstsuddi

ಬೀದರ್: ಕುಡಿಯಲು ಹಣ ನೀಡದಕ್ಕೆ ಮಹಿಳೆಯೊಬ್ಬರನ್ನು ಆಕೆಯ ಮಗನೇ ಕೊಡಲಿಯಿಂದ ಹೊಡೆದು ಕೊಂದಿರುವ ಆಘಾತಕಾರಿ ಘಟನೆ ನಗರದ ಚೆಟ್ಟಿ ಗಲ್ಲಿಯಲ್ಲಿ ನಡೆದಿದೆ.

ಮೃತರನ್ನು ಶಕುಂತಲಾ ರಾಜಕುಮಾರ ಶಿಂಧೆ(55) ಎಂದು ಗುರುತಿಸಲಾಗಿದೆ. ಮಗ ದೀಪಕ್ ಆರೋಪಿ. ಕುಡುಕನಾಗಿದ್ದ ದೀಪಕ್, ಮದ್ಯ ಸೇವನೆಗೆ ಹಣ ನೀಡುವಂತೆ ಪ್ರತಿನಿತ್ಯ ತನ್ನ ತಾಯಿಯೊಂದಿಗೆ ಜಗಳ ಮಾಡುತ್ತಿದ್ದ. ನಿನ್ನೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ತಾಯಿ ನಿರಾಕರಿಸಿದ್ದು, ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಕೋಪದ ಭರದಲ್ಲಿ ವ್ಯಕ್ತಿ ತನ್ನ ತಾಯಿಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

ಸಂಬಂಧಿಕರು ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಘಟನೆಯ ಬಗ್ಗೆ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಶಕುಂತಲಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಹುಮನಾಬಾದ್ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.