ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಸಿದ್ದರಾಮಯ್ಯನವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸರ್ವ ಪಕ್ಷಗಳ ಸಭೆ ಅಂತ್ಯವಾಗಿದೆ. ರಾಜ್ಯದಲ್ಲಿ ಮಳೆ ಕೊರತೆಯಾಗಿದ್ದು, ಪ್ರಸ್ತುತ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿ ನಾವಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಇದೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಕೊರತೆಯಾಗಿದೆ. ಡ್ಯಾಂಗಳಲ್ಲಿ ನೀರಿಲ್ಲ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಆಹಾಕಾರ ಉಂಟಾಗುವ ಸಾಧ್ಯತೆ ಇದೆ. ಇಂತಹ ಸಂದಿಗ್ಥ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದರು.
ತಮಿಳುನಾಡಿಗೆ ನಿತ್ಯ 5000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ(ಸಿಡಬ್ಲ್ಯೂಆರ್‌ಸಿ) ಆದೇಶ ನೀಡಿದೆ. ಇದನ್ನು ಮರು ಪರಿಶೀಲನೆ ಮಾಡುವಂತೆ ಮನವಿ ಮಾಡಲು ನಿರ್ಧರಿಸಿದ್ದೇವೆ. ವಸ್ತುಸ್ಥಿತಿ ವಿವರಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೆ ಪತ್ರ ಬರೆಯುತ್ತೇವೆ ಎಂದು ಸಿಎಂ ತಿಳಿಸಿದರು.
ಸಮಿತಿಯ ಮುಂದೆ ಮತ್ತೊಂದು ಅರ್ಜಿ ಹಾಕುತ್ತೇವೆ. ಸುಪ್ರೀಂಕೋರ್ಟ್ಗೆ ವಾಸ್ತವಾಂಶ ತಿಳಿಸುವ ಕೆಲಸ ಮಾಡುತ್ತೇವೆ. ಸೆಪ್ಟೆಂಬರ್ 11 ರ ತನಕ ನಾವು 99 ಟಿಎಂಸಿ ನೀರಿನ ಬದಲು 37 ಟಿಎಂಸಿ ಮಾತ್ರ ಬಿಟ್ಟಿದ್ದೇವೆ. ನಾವೀಗ ಸಂಪೂರ್ಣ ನೀರು ಬಿಡ್ತಿಲ್ಲ. ಬೆಳೆ ಉಳಿಸಿಕೊಳ್ಳಲು ನಮಗೆ 70 ಟಿಎಂಸಿ ಬೇಕು. 30 ಟಿಎಂಸಿ ಕುಡಿಯುವ ನೀರು ಹಾಗೂ 3 ಟಿಎಂಸಿ ಕೈಗಾರಿಕೆಗೆ ಬೇಕು. ನಮ್ಮ ಬಳಿ ಈಗ ಇರುವುದು 53 ಟಿಎಂಸಿ ಮಾತ್ರ. ನಾಲ್ಕು ಜಲಾಶಯಗಳಿಂದ ಕೇವಲ 53 ಟಿಎಂಸಿ ನೀರು ಮಾತ್ರ ನಮ್ಮತ್ರ ಇದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ಕಾವೇರಿ ನದಿಯ ಒಳಹರಿವು 30 ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿದೆ. ನೈಋತ್ಯ ಮಾನ್ಸೂನ್ ಮುಗಿಯುವ ಹಂತದಲ್ಲಿದೆ. ಜಲಾಶಯಗಳಿಗೆ ಒಳ ಹರಿವಿನ ಪ್ರಮಾಣ ಕ್ಷೀಣಿಸುತ್ತಿದ್ದು, ಈಗಿರುವ ನೀರನ್ನು ನಮ್ಮ ಅಗತ್ಯಗಳಿಗೆ ಕಾಯ್ದಿರಿಸಬೇಕಾಗಿದೆ. ಹೀಗಾಗಿ ಕಾವೇರಿ ಕೊಳ್ಳದ ಪರಿಸ್ಥಿತಿ ಅಧ್ಯಯನಕ್ಕೆ ಮನವಿ ಮಾಡಲಾಗಿದೆ. ಅಲ್ಲದೇ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಮನವಿ ಮಾಡಲಾಗಿದೆ. ಇನ್ನು ಸರ್ವಪಕ್ಷ ನಿಯೋಗ ಭೇಟಿಗೆ ಪ್ರಧಾನಿ ಬಳಿ ಸಮಯ ಕೇಳಲಾಗಿದೆ ಎಂದು ಹೇಳಿದ್ದಾರೆ.
ಮೂರು ದಶಕಗಳಲ್ಲಿ ಸರಾಸರಿ ಶೇ.54 ರಷ್ಟು ಮಳೆ ಕೊರತೆಯಾಗಿದೆ. ರಾಜ್ಯದಲ್ಲಿ ಬೆಳೆದಿರುವ ಬೆಳೆಗಳಿಗೆ 70.20 ಟಿಎಂಸಿ ನೀರು ಬೇಕು. ಕುಡಿಯುವ ನೀರಿನ ಉದ್ದೇಶಕ್ಕೆ 2024ರ ಸೆಪ್ಟೆಂಬರ್‌ನಿಂದ ಜುಲೈವರೆಗೆ 33 ಟಿಎಂಸಿ, ಕೈಗಾರಿಕೆಗಳ ಬಳಕೆಗೆ 3 ಟಿಎಂಸಿ ಅಗತ್ಯವಿದೆ. ಒಟ್ಟಾರೆ ಕರ್ನಾಟಕಕ್ಕೆ 106.20 ಟಿಎಂಸಿ ನೀರು ಬೇಕು ಎಂದು ವಿವರಿಸಿದರು.
ಆದರೆ, ಕಾವೇರಿ ಕಣಿವೆಯ ರಾಜ್ಯದ ನಾಲ್ಕು ಜಲಾಶಯಗಳಲ್ಲಿ ಲಭ್ಯವಿರುವ ಲೈವ್ ಸ್ಟೋರೇಜ್ 53.287 ಟಿಎಂಸಿ ಎಂದು ಡಿಸಿಎಂ ತಿಳಿಸಿದ್ದಾರೆ.










