ಕೈತಪ್ಪಿದ ಟಿಕೆಟ್- ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ತಮಿಳುನಾಡು ಸಂಸದ.

46
firstsuddi

ಈರೋಡ್: ತಮಿಳುನಾಡಿನ ಈರೋಡ್ ಕ್ಷೇತ್ರದ ಹಾಲಿ ಎಂಡಿಎಂಕೆ ಸಂಸದ ಎ.ಗಣೇಶಮೂರ್ತಿ (76) ಮುಂಬರುವ ಲೋಕಸಭಾ ಚುನಾವಣೆಗೆ ಟಿಕೆಟ್ ಕೈತಪ್ಪಿದ್ದಕ್ಕೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ನಿನ್ನೆ ಬೆಳಿಗ್ಗೆ ಗಣೇಶಮೂರ್ತಿಯವರ ಆರೋಗ್ಯದಲ್ಲಿ ಏರುಪೇರಾಗಿ, ವಾಂತಿ ಮಾಡಿಕೊಂಡಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಿಸಿದಾಗ ಅವರು ಕೀಟನಾಶಕ ಸೇವಿಸಿದ್ದು ತಿಳಿದುಬಂದಿದೆ. ತಪಾಸಣೆಯ ನಂತರ ಅವರನ್ನು ಐಸಿಯುಗೆ ದಾಖಲಿಸಲಾಗಿದ್ದು, ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಇಬ್ಬರು ವೈದ್ಯರು ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಮಧ್ಯಾಹ್ನ 2.30 ರ ಸುಮಾರಿಗೆ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಡಿಎಂಕೆ ನಾಯಕ ದುರೈ ವೈಕೋ ಆಸ್ಪತ್ರೆಗೆ ಭೇಟಿ ನೀಡಿದ್ದು, ಗಣೇಶಮೂರ್ತಿ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಇಸಿಎಂಒ ಚಿಕಿತ್ಸೆಯಲ್ಲಿದೆ ಎಂದು ಹೇಳಿದ್ದಾರೆ.

ವೈಕೋ ನಾಯಕತ್ವದ ಎಂಡಿಎಂಕೆ ಪಕ್ಷವು ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದೆ. ಕಳೆದ ಚುನಾವಣೆಯಲ್ಲಿ ಡಿಎಂಕೆ ತನ್ನ ಮಿತ್ರಪಕ್ಷಕ್ಕೆ ಈರೋಡ್ ಕ್ಷೇತ್ರವನ್ನು ಬಿಟ್ಟುಕೊಟ್ಟಿತ್ತು. ಅಲ್ಲಿಂದ ಎಂಡಿಎಂಕೆ ಅಭ್ಯರ್ಥಿ ಗಣೇಶಮೂರ್ತಿ ಸ್ಪರ್ಧೆ ಮಾಡಿ ಗೆದ್ದಿದ್ದರು. ಈ ಬಾರಿ ಈರೋಡ್ ಲೋಕಸಭೆ ಕ್ಷೇತ್ರದಿಂದ ಡಿಎಂಕೆ ತನ್ನದೇ ಅಭ್ಯರ್ಥಿ ಕೆ.ಇ ಪ್ರಕಾಶ್ ಅವರಿಗೆ ಟಿಕೆಟ್ ನೀಡಿದೆ.