ಕೊಡಗು : ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆಯುತ್ತಿದ್ದು, ಅಲ್ಲಲ್ಲಿ ಭೂಕುಸಿತ ಸಂಭವಿಸುತ್ತಿದೆ. ಕಳೆದ ವರ್ಷ ಸಂಭವಿಸಿದ ಪ್ರವಾಹ ಪರಿಸ್ಥಿತಿಯನ್ನು ನೆನಪಿಸುವಂತೆ ಮಳೆಯಾಗುತ್ತಿದೆ. ತಲಾಕಾವೇರಿಯಲ್ಲಿ ಐವರು ಮಣ್ಣಿನ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಇಲ್ಲಿನ ಕಾವೇರಿ ತೀರ್ಥಕ್ಷೇತ್ರ ತಲಕಾವೇರಿಯಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದ್ದು, ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್. ನಾರಾಯಣ ಆಚಾರ್, ಅವರ ಪತ್ನಿ, ಆನಂದತೀರ್ಥ ಮತ್ತು ಇಬ್ಬರು ಅರ್ಚಕರು ನಾಪತ್ತೆಯಾಗಿದ್ದಾರೆ.
ತಲಕಾವೇರಿ ಪುಣ್ಯ ಕ್ಷೇತ್ರ ಬಳಿಯಲ್ಲಿ ಭೂಕುಸಿತದಿಂದಾಗಿ ಎರಡು ಮನೆಗಳು ಸಂಪೂರ್ಣ ಮಣ್ಣು ಪಾಲಾಗಿವೆ. ಮಣ್ಣಿನ ಅಡಿ ಸಿಲುಕಿರುವವರ ರಕ್ಷಣೆಗೆ ಸ್ಥಳೀಯರೊಂದಿಗೆ ವಿಪತ್ತು ನಿರ್ವಹಣಾ ಪಡೆ ಕೂಡಾ ಕಾರ್ಯಾಚರಣೆ ನಡೆಸುತ್ತಿದೆ.
ಸುಮಾರು 6 ಕಿ.ಮೀ ಉದ್ದಕ್ಕೆ ಬೆಟ್ಟಸಾಲು ಕುಸಿದು ಸಂಭವಿಸಿದ ಈ ದುರಂತದಲ್ಲಿ ಎರಡು ಕಾರು, 230 ಕ್ಕೂ ಹೆಚ್ಚು ಹಸುಗಳು ಕಾಣೆಯಾಗಿವೆ. ಭಾರೀ ಮಂಜು ಮತ್ತು ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ. ಬಾಗಮಂಡಲ-ತಲಕಾವೇರಿ ರಸ್ತೆಯಲ್ಲಿ ಅಲ್ಲಲ್ಲಿ ಭೂಕುಸಿತ ಉಂಟಾಗಿರುವುದರಿಂದ ರಕ್ಷಣಾ ಕಾರ್ಯಪಡೆಯ ವಾಹನಗಳೂ ವೇಗವಾಗಿ ಸ್ಥಳಕ್ಕೆ ತೆರಳಲು ಅಡ್ಡಿಯಾಗಿವೆ. ಸ್ಥಳದಲ್ಲಿ ಸ್ಥಳೀಯರು ಕಾರ್ಯಾಚರಣೆ ಆರಂಭೀಸಿದ್ದಾರೆ.
ಭಾರಿ ಮಳೆಯಾಗುತ್ತಿರುವುದರಿಂದ ಕಂದಾಯ ಸಚಿವ ಆರ್. ಅಶೋಕ್ ಅವರು ಇಂದು ಜಿಲ್ಲಾಧಿಕಾರಿ ಅನೀಸ್ ಜಾಯ್ ಕಣ್ಮಣಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಪರಿಸ್ಥತಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ವಿದ್ಯುತ್ ಸ್ಥಗಿತಗೊಂಡಿದ್ದು, ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಮಡಿಕೇರಿಯಿಂದ ವೀರಾಜಪೇಟೆಗೆ ತೆರಳುವ ರಸ್ತೆಯ ಬೇತ್ರಿ ಸೇತುವೆ ಕಾವೇರಿ ನದಿ ನೀರಿನಿಂದ ತುಂಬಿಕೊಂಡು ಸೇತುವೇ ಮೇಲೆಯೇ ಹರಿಯುತ್ತಿರುವುದರಿಂದಾಗಿ ಈ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳೀಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 700 ಮಂದಿಯನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯ ಹಾರಂಗಿ ಜಲಾಶಯಕ್ಕೆ 10 ಸಾವಿರ ಕ್ಯೂಸೆಕ್ ಒಳಹರಿವಿದ್ದು, 12 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.










