ಚೆನ್ನೈ : ಕೊರೊನಾ ಮಹಾಮಾರಿಗೆ ಜನರು ಪರದಾಡುತ್ತಿದ್ದಾರೆ. ಸರಿಯಾದ ಸಮಯಕ್ಕೆ ಆಕ್ಸಿಜನ್, ಬೆಡ್ ಸಿಗದೇ ಪ್ರಾಣವನ್ನು ಬಿಡುತ್ತಿದ್ದಾರೆ. ಇದರ ಮಧ್ಯೆಯೂ ವ್ಯಾಕ್ಸಿನ್ ಗಾಗಿ ಜನ ಆಸ್ಪತ್ರೆಗಳ ಮುಂದೆ ಮುಗಿಬೀಳುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ವ್ಯಾಕ್ಸಿನ್ ಪಡೆಯುತ್ತಿದ್ದಾರೆ. ಇತ್ತೀಚೆಗೆ ಬಹುಭಾಷಾ ನಟಿ ನಯನತಾರಾ ಕೂಡ ಕೋವಿಡ್ ಲಸಿಕೆ ಪಡೆದುಕೊಂಡಿದ್ದರು. ಆದರೆ ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ನಟಿ ನಯನತಾರಾ ಹಾಗೂ ಅವರ ಬಾಯ್ ಫ್ರೆಂಡ್ ವಿಘ್ನೇಶ್ ಶಿವನ್ ಅವರು ಕೊರೊನಾ ಲಸಿಕೆ ಪಡೆದುಕೊಂಡಿದ್ದರು. ಈ ಕುರಿತು ಕೆಲವು ಫೋಟೋವನ್ನು ವಿಘ್ನೇಶ್ ಶಿವನ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ ವಿಘ್ನೇಶ್ ಶಿವನ್ ಫೋಟೋದಲ್ಲಿ ಕಾಣಿಸುತ್ತಿರುವ ಸಿರಿಂಜ್, ನಯನತಾರಾ ಫೋಟೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ನಟಿ ನಯನತಾರಾ ಲಸಿಕೆ ನೀಡುತ್ತಿದ್ದ ನರ್ಸ್ ಕೈಯಲ್ಲಿ ಸಿರಿಂಜ್ ಇಲ್ಲ ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ನಟಿ ನಯನತಾರಾ ಅಭಿಮಾನಿಗಳು ಮಾತ್ರ, ಆ ಫೋಟೋವನ್ನು ಝೂಮ್ ಮಾಡಿ ನೋಡಿದಾಗ ಅದರಲ್ಲಿ ಚಿಕ್ಕ ಸೂಜಿ ಕಾಣಿಸುತ್ತಿದೆ. ಸಿರಿಂಜ್ ಚಿಕ್ಕದ್ದಾಗಿರುವುದರಿಂದ ನರ್ಸ್ ಕೈಯಲ್ಲಿ ಅವಿತುಕೊಂಡಿದೆ. ಅಲ್ಲದೆ ವಿಘ್ನೇಶ್ ಶಿವನ್ ಫೋಟೋವನ್ನು ಮತ್ತೊಂದು ಬದಿಯಿಂದ ಕ್ಲಿಕ್ಕಿಸಿರುವ ಕಾರಣ ಸಿರಿಂಜ್ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಹೇಳುವ ಮೂಲಕ ನಯನತಾರಾ ಅಭಿಮಾನಿಗಳು ವಾದವನ್ನು ಮಂಡಿಸಿದ್ದಾರೆ.










