ಗಂಗಾಮತಸ್ಥ ಸಮುದಾಯಕ್ಕೆ ರಾಜಕೀಯ ನ್ಯಾಯ ನೀಡುವಲ್ಲಿ ಬಿಜೆಪಿ ಹಿಂದೆ ಬಿದ್ದಿಲ್ಲ : ಸಿ.ಟಿ.ರವಿ

79
firstsuddi

ಚಿಕ್ಕಮಗಳೂರು: ಗಂಗಾಮತಸ್ಥ ಸಮುದಾಯಕ್ಕೆ ರಾಜಕೀಯ ನ್ಯಾಯ ನೀಡುವಲ್ಲಿ ಭಾರತೀಯ ಜನತಾ ಪಕ್ಷ ಹಿಂದೆ ಬಿದ್ದಿಲ್ಲ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಹೇಳಿದರು.

ಗಂಗಾಮತಸ್ಥರ ಜಿಲ್ಲಾ ಮತ್ತು ತಾಲ್ಲೂಕು ಸಂಘ, ನೌಕರರ ಕ್ಷೇಮಾಭಿವೃದ್ಧಿ ಸಂಘ ಇಲ್ಲಿನ ದೋಣಿ ಖಣ-ಗಾಂಧೀನಗರದಲ್ಲಿ ನಿನ್ನೆ ಏರ್ಪಡಿಸಿದ್ದ ಅಂಬಿಗರ ಚೌಡಯ್ಯನವರ ಜನ್ಮ ದಿನಾಚರಣೆ ಮತ್ತು ಸಮುದಾಯ ಭವನದ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಂಗಾಮತಸ್ಥ ಸಮುದಾಯದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಸಾಹೆಬಣ್ಣ ತಳವಾರ್ ಮತ್ತು ಪಕ್ಷದ ಹಿರಿಯ ನಾಯಕ ಬಾಬುರಾವ್ ಚಿಂಚನಸೂರ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಪಕ್ಷ ಮಾಡಿದೆ ಎಂದು ತಿಳಿಸಿದರು.

ಗಂಗಾಮತಸ್ಥ ಸಮುದಾಯದ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ದೇಶದ ಪ್ರಥಮ ಪ್ರಜೆಯನ್ನಾಗಿ ಬಿಜೆಪಿ ಮಾಡಿದೆ ಎಂದ ಅವರು, ಗಂಗಾಮತಸ್ಥ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆಗೊಳಿಸುವುದು ಅತ್ಯಂತ ಕಷ್ಟಕರವಾಗಿದ್ದರೂ ಸಹ ಅದರ ಪರವಾಗಿ ತಾವು ಸದಾ ಸಮುದಾಯದೊಂದಿಗೆ ನಿಲ್ಲುವುದಾಗಿ ಭರವಸೆ ನೀಡಿದರು.

ನಗರದ ಜಿಲ್ಲಾ ಗಂಗಾಮತಸ್ಥರ ಸಂಘದ ನಿವೇಶನದ ವಿವಾದವನ್ನು ಬಗೆಹರಿಸಲಾಗುವುದು. ಸುಸಜ್ಜಿತ ಸಮುದಾಯ ಭವನದ ನಿರ್ಮಾಣಕ್ಕೆ ಅನುದಾನವನ್ನು ಕೊಡಿಸಲಾಗುವುದು. ದೋಣಿ ಖಣದ ಎರಡು ರಸ್ತೆಗಳಿಗೆ ನಿಜಶರಣ ಅಂಬಿಗರ ಚೌಡಯ್ಯನವರು ಮತ್ತು ಮಹರ್ಷಿ ವೇದವ್ಯಾಸರ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗಂಗಾಮತಸ್ಥ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸಿ.ಟಿ.ಅಶೋಕ್, ನಗರದ ಜಿಲ್ಲಾ ಗಂಗಾಮತಸ್ಥರ ಸಂಘದ ನಿವೇಶನದ ವಿವಾದವನ್ನು ಬಗೆಹರಿಸಬೇಕು. ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆಗೊಳಿಸಬೇಕು. ದೋಣಿ ಖಣದ ಎರಡು ರಸ್ತೆಗಳಿಗೆ ಅಂಬಿಗರ ಚೌಡಯ್ಯನವರು ಮತ್ತು ವೇದವ್ಯಾಸರ ಹೆಸರನ್ನು ನಾಮಕರಣ ಮಾಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷ ಕೆ.ಎಂ.ಧನಂಜಯ, ಗಂಗಾಮತಸ್ಥ ಸಮುದಾಯದವರಾದ ನಗರಸಭೆ ಸದಸ್ಯ ಜೆ.ರಾಜು ಅವರನ್ನು ನಗರಸಭೆ ಅಧ್ಯಕ್ಷರನ್ನಾಗಿ ಮಾಡುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು.

ಸಮುದಾಯ ಭವನದ ನಿರ್ಮಾಣಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಮತ್ತು ಸಹಕರಿಸಿದವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಗಾಯಕ ಮಲ್ಲಿಗೆ ಸುಧೀರ್ ಅವರಿಂದ ಗೀತಗಾಯನ ನಡೆಯಿತು.

ನಗರಸಭೆ ಸದಸ್ಯರಾದ ಸಿ.ಎಂ.ಕುಮಾರ್, ಜೆ.ರಾಜು, ಗಂಗಾಮತಸ್ಥರ ಸಂಘದ ತಾಲ್ಲೂಕು ಅಧ್ಯಕ್ಷ ಪುಟ್ಟಪ್ಪ, ಗೌರವಾಧ್ಯಕ್ಷ ಎನ್.ಎಚ್.ಮಂಜಪ್ಪ, ತಾಲ್ಲೂಕು ಅಧ್ಯಕ್ಷ ಪರಮೇಶ್, ತರೀಕೆರೆ ತಾಲ್ಲೂಕು ಅಧ್ಯಕ್ಷ ಪರಮೇಶ್ವರಪ್ಪ, ಸಂತೋಷ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ಮೊಗವೀರ ಮಹಾಜನ ಸಂಘದ ಗೌರಾವಧ್ಯಕ್ಷ ಡಿ.ಎಲ್.ಶಂಕರನಾಥ್ ಉಪಸ್ಥಿತರಿದ್ದರು.