ಗಾಳಿಪಟಕ್ಕೆ ಬಳಸುವ ಗಾಜಿನ ಪುಡಿ ಸಹಿತ ‘ಮಾಂಜಾ ದಾರ’ ನಿಷೇಧಿಸಿದ ಕರ್ನಾಟಕ ಸರ್ಕಾರ.

25

ಬೆಂಗಳೂರು: ಉತ್ತರ ಭಾರತದಲ್ಲಿ ವ್ಯಾಪಕ ಸುದ್ದಿಯಾಗಿದ್ದ ಗಾಳಿಪಟಕ್ಕೆ ಬಳಸುವ ‘ಮಾಂಜಾದಾರ’ದ ಕುರಿತು ಕರ್ನಾಟಕ ಸರ್ಕಾರ ಇಂದು ಮಹತ್ವದ ನಿರ್ಣಯ ಕೈಗೊಂಡಿದೆ. ಪ್ರಾಣಿಪ್ರಿಯರ ಸಲಹೆಗಳನ್ನು ಸ್ವೀಕರಿಸಿ, ಮಾನವರು, ಪಕ್ಷಿಗಳು ಮತ್ತು ಪರಿಸರಕ್ಕೆ ಹಾನಿಯನ್ನು ತಡೆಯಲು ಗಾಳಿಪಟ ಹಾರಿಸಲು ಬಳಸುವ ಲೋಹ ಅಥವಾ ಗಾಜಿನ ಲೇಪಿತ ದಾರ ಅಥವಾ ಮಾಂಜಾದಾರ ಬಳಸುವುದನ್ನು ಕರ್ನಾಟಕ ಸರ್ಕಾರ ನಿಷೇಧಿಸಿದೆ. ಪರಿಸರ ಸಂರಕ್ಷಣೆ ಕಾಯಿದೆ 1986 ರ ಸೆಕ್ಷನ್ 5 ರ ಅಡಿಯಲ್ಲಿ ಸರ್ಕಾರವು ತನ್ನ ಅಧಿಸೂಚನೆಗೆ ತಿದ್ದುಪಡಿಯನ್ನು ತಂದು ಆದೇಶ ಹೊರಡಿಸಿದ್ದು, ಈಗ ಯಾವುದೇ ಚೂಪಾದ, ಲೋಹೀಯ ಅಥವಾ ಗಾಜಿನ ಪುಡಿ, ಅಂಟುಗಳು ಅಥವಾ ಇತರ ಯಾವುದೇ ವಸ್ತುಗಳು ಅಂದರೆ ದಾರವನ್ನು ಬಲಪಡಿಸುವ ಸಾಮಗ್ರಿ ಲೇಪಿತ ಮಾಂಜಾದಾರವನ್ನು ನಿಷೇಧಿಸಲಾಗಿದೆ. ಗಾಜಿನಪುಡಿ ಅಥವಾ ಲೋಹೀಯ ಘಟಕ ರಹಿತ ದಾರವನ್ನು ಮಾತ್ರ ಗಾಳಿಪಟ ಹಾರಿಸಲು ಅನುಮತಿಸಲಾಗಿದೆ. ಈ ಹಿಂದೆ ನೈಲಾನ್ “ಚೈನೀಸ್” ಮಾಂಜಾಗೆ ಮಾತ್ರ ಸೀಮಿತವಾಗಿದ್ದ ನಿಷೇಧವನ್ನು ಗಾಜಿನ ಅಥವಾ ಲೋಹದ ಪುಡಿ ಲೇಪಿತ ದಾರಗಳಿಗೂ ನಿಷೇಧ ಅನ್ವಯಿಸಲು ಸರ್ಕಾರ ಅಧಿಸೂಚನೆ ಮೂಲಕ ತಿಳಿಸಿದೆ.