ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಪುತ್ರ ಎನ್​ಕೌಂಟರ್​ನಲ್ಲಿ ಸಾವು…

59
firstsuddi

ಲಕ್ನೋ : ಮಾಜಿ ಸಂಸದ, ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಪುತ್ರ ಅಸಾದ್ ಪೊಲೀಸ್ ಎನ್​ಕೌಂಟರ್​ನಲ್ಲಿ ಸಾವನ್ನಪ್ಪಿದ್ದಾನೆ. ಉತ್ತರಪ್ರದೇಶದ ಝಾನ್ಸಿಯಲ್ಲಿ ಎನ್‌ಕೌಂಟರ್‌ ನಡೆದಿದ್ದು, ಎನ್​ಕೌಂಟರ್​ನಲ್ಲಿ ಗುಲಾಮ್ ಮೊಹಮ್ಮದ್ ನನ್ನು ಕೂಡ ಹತ್ಯೆಗೈಯಲಾಗಿದೆ.

ಉಮೇಶ್ ಪಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಅಸಾದ್ ಮತ್ತು ಗುಲಾಂ ಬಗ್ಗೆ ಸುಳಿವು ನೀಡಿದವರಿಗೆ ತಲಾ 5 ಲಕ್ಷ ರೂ. ಬಹುಮಾನವನ್ನು ಪೊಲೀಸರು ಘೋಷಿಸಿದ್ದರು. ಇದೀಗ ನಾಪತ್ತೆಯಾಗಿದ್ದ ಈ ಇಬ್ಬರನ್ನು ಇಂದು ಎನ್‌ಕೌಂಟರ್‌ ಮಾಡಿ ಹತ್ಯೆ ಮಾಡಲಾಗಿದೆ. ಹತ್ಯೆಯಾದ ಇಬ್ಬರಿಂದ ಅತ್ಯಾಧುನಿಕ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

2005ರಲ್ಲಿ ಅಲಹಾಬಾದ್ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ನಾಯಕ ರಾಜು ಪಾಲ್ ಗೆದ್ದಿದ್ದರು. ಇದಾದ 1 ತಿಂಗಳಲ್ಲಿ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾಗಿದ್ದರು. ಫೆ.24 ರಂದು ಉಮೇಶ್ ಪಾಲ್ ಅವರನ್ನು ಪ್ರಯಾಗ್‌ರಾಜ್‌ನಲ್ಲಿರುವ ಅವರ ನಿವಾಸದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ 40 ಜನರನ್ನು ಆರೋಪಿಗಳೆಂದು ಪೊಲೀಸರು ಹೆಸರಿಸಿದ್ದಾರೆ. ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಅತೀಕ್ ಅಹ್ಮದ್, ಆತನ ಸಹೋದರ ಮತ್ತು ಮಾಜಿ ಶಾಸಕ ಅಶ್ರಫ್ ರಾಜು ಪಾಲ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದಾರೆ. ಇವರಿಬ್ಬರೂ ಸದ್ಯ ಜೈಲಿನಲ್ಲಿದ್ದಾರೆ.