ಮೈಸೂರು : ಯುವಕನಿಗೆ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ರಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಳೆದ ರಾತ್ರಿ ಘಟನೆ ನಡೆದಿದ್ದು, ಅರ್ಜುನ್ (24) ಎಂಬಾತ ಕೊಲೆಯಾದ ದುರ್ದೈವಿ. ಜೆಸಿಬಿ ವಾಹನ ಚಾಲಕನಾಗಿದ್ದ ಅರ್ಜುನ್ ಗೆ ಕಿಡಿಗೇಡಿಗಳು ಚಾಕುವಿನಿಂದ ಮನಬಂದಂತೆ ಚುಚ್ಚಿದ್ದಾರೆ. ಕೊನೆಗೆ ಹಳ್ಳಕ್ಕೆ ತಳ್ಳಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ.
ಅರ್ಜುನ್ ಗೆ ಕಳೆದ ರಾತ್ರಿ ಫೋನ್ ಮಾಡಿ, ಗ್ರಾಮದ ಹೊರ ವಲಯಕ್ಕೆ ಕರೆಸಿಕೊಂಡು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎನ್ನಲಾಗ್ತಿದ್ದು, ಪರಿಚಯಸ್ಥರೇ ಅರ್ಜುನ್‌ನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಈ ಕುರಿತು ಹೆಚ್ಚುವರಿ ಎಸ್ ಪಿ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










