ಲೈಂಗಿಕ ದೌರ್ಜನ್ಯ ಆರೋಪ – ಸಚಿವ ಸ್ಥಾನಕ್ಕೆ ಮಿಲಿಂದ್ ನಾಯ್ಕ್ ರಾಜೀನಾಮೆ…

59
firstsuddi

ಪಣಜಿ : ಗೋವಾ ನಗರಾಭಿವೃದ್ಧಿ ಸಚಿವ ಮತ್ತು ಬಿಜೆಪಿ ಶಾಸಕ ಮಿಲಿಂದ್ ನಾಯ್ಕ್ ವಿರುದ್ಧ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಕುರಿತಂತೆ ಗೋವಾ ಮುಖ್ಯಮಂತ್ರಿಗಳ ಕಚೇರಿ ನಿನ್ನೆ ತಡರಾತ್ರಿ ಅಧಿಕೃತವಾಗಿ ಪ್ರಕಟಿಸಿದ್ದು, ಸಚಿವ ಮಿಲಿಂದ್ ನಾಯ್ಕ್ ‘ನ್ಯಾಯ ಮತ್ತು ಮುಕ್ತ ತನಿಖೆಗಾಗಿ’ ನಿನ್ನೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸಿಎಂ ಕಚೇರಿಗೆ ಪತ್ರವನ್ನು ರವಾನಿಸಿದ್ದಾರೆ. ಸಿಎಂ ಇದನ್ನು ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಿದ್ದಾರೆ ಎಂದು ಟ್ವೀಟ್ ಮಾಡಿದೆ.

ಕೆಲವು ದಿನಗಳ ಹಿಂದೆ ಸಚಿವ ಮಿಲಿಂದ್ ನಾಯ್ಕ್ ಮತ್ತು ಸಂತ್ರಸ್ತ ಮಹಿಳೆಯ ನಡುವೆ ನಡೆದ ಆಡಿಯೋ ಸಂಭಾಷಣೆಯೊಂದು ಬಹಿರಂಗವಾಗಿತ್ತು. ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾರಣಕ್ಕಾಗಿ ಸಚಿವರು ರಾಜೀನಾಮೆ ಸಲ್ಲಿಸಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿ 15 ದಿನಗಳ ಗಡುವು ನೀಡಿದ್ದರು.

ಮಿಲಿಂದ್ ನಾಯ್ಕ್ ದಕ್ಷಿಣ ಗೋವಾದ ಮರ್ಮಗೋವ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಶಾಸಕ ಪ್ರಮೋದ್ ಸಾವಂತ್ ನೇತೃತ್ವದ ಸಂಪುಟದಲ್ಲಿ ನಗರಾಭಿವೃದ್ಧಿ ಖಾತೆಯನ್ನು ನಿಭಾಯಿಸುತ್ತಿದ್ದರು.