ಚಿಕ್ಕಮಗಳೂರು : ಇಂದಿನ ಮಕ್ಕಳು ಮತ್ತು ಯುವ ಜನತೆ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು: ಜಿ.ಪಂ ಉಪಾಧ್ಯಕ್ಷ ಸೋಮಶೇಖರ್.

334
First Suddi

ಚಿಕ್ಕಮಗಳೂರು : ದೇಶದ ಹಿತದೃಷ್ಠಿಯಿಂದ ಇಂದಿನ ಮಕ್ಕಳು ಮತ್ತು ಯುವ ಜನತೆ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸೋಮಶೇಖರ್ ಸಲಹೆ ಮಾಡಿದರು.
ಭಾರತ ಸೇವಾದಳದ ಜ್ಞಾನಜ್ಯೋತಿ ಘಟಕ ನಗರದ ಆಜಾóದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಇಂದು ಏರ್ಪಡಿಸಿದ್ದ ಸೇವಾದಳದ ನೇತಾರ ಐ.ಎನ್.ಎ ರಾಮರಾವ್ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ಅಭಿವೃದ್ದಿ ಪಥದಲ್ಲಿ ಸಾಗಬೇಕಾದರೆ ನಮ್ಮ ಮಕ್ಕಳು ಮತ್ತು ಯುವ ಜನತೆಗೆ ನಮ್ಮತನದ ಅರಿವಿರಬೇಕು ಹಾಗಾಗಿ ಅವರು ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯನ್ನು ಓದಬೇಕು, ಅವರ ಹಾಗೆ ಬದುಕಲು ಪ್ರಯತ್ನಿಸಬೇಕು, ರಾಷ್ಟ್ರೀಯತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಹಂಪಯ್ಯ ಮಾತನಾಡಿ ಇಂದಿನ ಪೀಳಿಗೆ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ದೇಶದ ಅಭಿವೃದ್ದಿಯಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಸೇವಾದಳದ ತಾಲ್ಲೂಕು ಸಂಘಟಕ ಎಸ್.ಈ.ಲೋಕೇಶ್ವರಾಚಾರ್ ಐ.ಎನ್.ಎ ರಾಮರಾವ್ ಅವರು ಭಾರತ ಸೇವಾದಳವನ್ನು ಕಟ್ಟಲು ಅದರ ಸಂಸ್ಥಾಪಕ ನಾ.ಸು.ಹರ್ಡಿಕರ್ ಅವರ ಹೆಗಲಿಗೆ ಹೆಗಲು ಕೊಟ್ಟು ದುಡಿದವರು ಎಂದು ಹೇಳಿದರು.
ನೇತಾಜಿ ಸುಭಾಷ್‍ಚಂದ್ರ ಬೋಸ್ ಅವರ ಒಡನಾಡಿಯಾಗಿದ್ದ ರಾವiರಾವ್ ಅವರು ಭಾರತ ಸೇವಾದಳಕ್ಕಾಗಿ ತಮ್ಮ ಇಡೀ ಜೀವನವನ್ನು ಸವೆಸಿದವರು, ಸೇವೆಗಾಗಿ ಬಾಳು ಎಂಬಂತೆ ಬದುಕಿದವರು ಎಂದು ತಿಳಿಸಿದರು.
ಕಡೂರು ತಾಲ್ಲೂಕು ಪಿ.ಕೋಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ವೈ.ಕೆ.ರವಿ ಅವರಿಗೆ ಸಮಾರಂಭದಲ್ಲಿ ರಾಷ್ಟ್ರೀಯ ಸೇವಾರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕಿ ಬಿ.ಆರ್.ಗೀತಾ ಅಧ್ಯಕ್ಷತೆ ವಹಿಸಿದ್ದರು, ಸೇವಾದಳದ ಜಿಲ್ಲಾ ಸಂಘಟಕ ಚಂದ್ರಕಾಂತ್, ಕುಮಾರ್, ಶಿಕ್ಷಕಿಯರಾದ ಜಯಂತಿ, ಸಾವಿತ್ರಿ, ನಾಗವೇಣಿ ಉಪಸ್ಥಿತರಿದ್ದರು.