ಚಿಕ್ಕಮಗಳೂರು : ಇಂದಿನ ಯುವ ಜನತೆ ವಿನಯ ಮತ್ತು ವಿಧೇಯತೆಯನ್ನು ಮೈಗೂಡಿಸಿಕೊಳ್ಳಬೇಕು : ಹಿರಿಗಯ್ಯ.

171
firstsuddi

ಚಿಕ್ಕಮಗಳೂರು : ಇಂದಿನ ಯುವ ಜನತೆ ವಿನಯ ಮತ್ತು ವಿಧೇಯತೆಯನ್ನು ಮೈಗೂಡಿಸಿಕೊಳ್ಳಬೇಕು, ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹಿರಿಗಯ್ಯ ಸಲಹೆ ಮಾಡಿದರು.
ನಗರದ ಸಂತ ಜೋಸೇಫರ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯಡಿ ತಾಲ್ಲೂಕಿನ ಮತ್ತಾವರ ಗ್ರಾಮದಲ್ಲಿ ಹಮ್ಮಿಕೊಂಡಿರುವ ಏಳು ದಿನಗಳ ಕಾಲದ ವಾರ್ಷಿಕ ವಿಶೇಷ ಶಿಬಿರಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ದೇಶ ಇಂದು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದೆ, ನಮ್ಮ ಯುವ ಜನತೆ ಶಿಕ್ಷಣವಂತರಾಗುತ್ತಿದ್ದಾರೆ ಆದರೆ ವಿನಯ, ವಿಧೇಯತೆ, ಮಾನವೀಯತೆಯನ್ನು ಮರೆಯುತ್ತಿದ್ದಾರೆ ಇದರಿಂದಾಗಿ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ ಅದರಲ್ಲೂ ಶಿಕ್ಷಣವಂತರೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ವಿಷಾದಿಸಿದರು.
ಈ ಹಿನ್ನೆಲೆಯಲ್ಲಿ ಇಂದಿನ ಯುವಜನತೆ ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಬೇಕು, ಸಮಾಜಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷ ಭೈರೇಗೌಡ ಮಾತನಾಡಿ ವಿದ್ಯಾರ್ಥಿದೆಸೆಯಿಂದಲೇ ಸೇವಾಮನೋಭಾವನೆ ರೂಢಿಸಿಕೊಳ್ಳಬೇಕು ಎಂದರು.
ಕಾಲೇಜಿನ ಕಾರ್ಯದರ್ಶಿ ಫಾದರ್ ಪೀಟರ್ ಬ್ರ್ಯಾಂಕ್ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯಡಿ ಗ್ರಾಮದಲ್ಲಿ ಏಳು ದಿನಗಳ ಕಾಲ ಸ್ವಚ್ಚತೆ, ಗ್ರಾಮಸ್ಥರ ಆರೋಗ್ಯ ತಪಾಸಣೆ, ಕಾನೂನು ತಿಳುವಳಿಕೆ ಸೇರಿದಂತೆ ಹಲವು ಸೇವಾ ಚಟುವಟಿಕೆಗಳನ್ನು ವಿದ್ಯಾರ್ಥಿಗಳು ನಡೆಸಲಿದ್ದು ಗ್ರಾಮಸ್ಥರು ಅವರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಾಲೇಜಿನ ಪ್ರಾಂಶುಪಾಲ ವಿನ್ಸೆಂಟ್ ಕಾರ್ಡೋಜಾ ಅಧ್ಯಕ್ಷತೆ ವಹಿಸಿದ್ದರು, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಎಂ.ಎ.ವಿನಯ್‍ಕುಮಾರ್, ತಾ.ಪಂ. ಸದಸ್ಯ ಕೆ.ಯು.ಮಹೇಶ್, ಗ್ರಾ.ಪಂ. ಸದಸ್ಯರಾದ ಎಂ.ಪಿ.ಪ್ರಭಾಕರ್, ಪುನೀತ್ ಕುಮಾರ್, ಜಯಮ್ಮ, ಕೆ.ಎಸ್.ಜಗನ್ನಾಥ್, ಎನ್.ಎಸ್.ಗುರುಮೂರ್ತಿ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಪ್ರಕಾಶ್, ದಿನೇಶ್ ಉಪಸ್ಥಿತರಿದ್ದರು.