ಚಿಕ್ಕಮಗಳೂರು : ಎರಡು ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಸಾವು!

147
First Suddi

ಚಿಕ್ಕಮಗಳೂರು : ಎರಡು ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಸಾವಿಗೀಡಾಗಿರುವ ಘಟನೆ ಕಡೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಕಡೂರು ತಾಲ್ಲೂಕಿನ ಅಂಚೆಚೋಮನಹಳ್ಳಿ ಗ್ರಾಮದ ಶೀಲಾ(22) ಮೃತ ದುರ್ದೈವಿ. ಮದುವೆಯಾಗಿ ಮೂರು ವರ್ಷವಾಗಿತ್ತು. ಮೊದಲ ಮಗು ಹೆಣ್ಣಾಗಿದ್ದು, ಈಗ ಮುದ್ದಾದ ಗಂಡು ಮಗು ಜನಿಸಿದೆ. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವನ್ನಪ್ಪಿದ್ದಾಳೆಂದು ಕುಟುಂಬಸ್ಥರು ಮೃತಳ ಶವವನ್ನು ಪೊಲೀಸ್ ಠಾಣೆ ಮುಂದಿಟ್ಟು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಎರಡು ದಿನದ ಹಿಂದೆ ಡೆಲಿವರಿಯಾದ ಶೀಲಾ ಅವರಿಗೆ ತೀವ್ರವಾದ ರಕ್ತಸ್ರಾವ ಆಗುತ್ತಿತ್ತು. ನಂತರ ವೈದ್ಯರು ಬಾಣಂತಿಯನ್ನು ಶಿವಮೊಗ್ಗಕ್ಕೆ ಕರೆದೊಯ್ಯುವಂತೆ ಸೂಚಿಸಿದ್ದರು. ಬಾಣಂತಿಯನ್ನು ಶಿವಮೊಗ್ಗಕ್ಕೆ ಕರೆದೊಯ್ದು ಚಿಕಿತ್ಸೆಗೆ ಸಿದ್ಧತೆ ನಡೆಸಿಕೊಳ್ಳುವ ಮುನ್ನವೇ ಸಾವಿಗೀಡಾಗಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತಳ ಪೋಷಕರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ಅಕ್ಷಯ್ ಅವರು ಈಗಾಗಲೇ ಡಿ.ಎಚ್.ಓ ಜೊತೆ ಮಾತನಾಡಿದ್ದು, ತನಿಖೆ ಮಾಡುವುದಾಗಿ ತಿಳಿಸಿದ್ದಾರೆ. ತನಿಖೆಯ ರಿಪೋರ್ಟ್ ಬಂದ ಬಳಿಕ ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.