ಚಿಕ್ಕಮಗಳೂರು : ಕಾಫಿನಾಡಿನಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಇಂದು ಒಂದೇ ಶಾಲೆಯ 26 ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ತಗಲಿದೆ. ಕಳೆದ ಎರಡು ದಿನದ ಹಿಂದೆಯಷ್ಟೆ ನಗರದಲ್ಲಿ ಕೊರೊನಾಗೆ ದಂಪತಿ ಬಲಿಯಾಗಿದ್ದರು. ಅದೇ ದಿನ ನಗರದ ಬಸವನಹಳ್ಳಿ ಸರ್ಕಾರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನ 400ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಆದರೆ ಇದೀಗ ಕೆಲವರ ವರದಿ ಬಂದಿದ್ದು, ಅದೇ ಶಾಲೆಯ 26 ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದೆ. ಆ ವಿದ್ಯಾರ್ಥಿನಿಯಿಂದಲೇ ಸೋಂಕು ತಗುಲಿದೆ ಎಂಬ ಶಂಕೆ ವ್ಯಕ್ತವಾಗಿದೆ. ಇನ್ನೂ ಬಸವನಹಳ್ಳಿ ಪ್ರೌಡಶಾಲೆಗೆ ಹೊಂದಿಕೊಂಡೇ ಕಾಲೇಜು ಕೂಡ ಇರುವುದರಿಂದ ಕಾಲೇಜು ವಿದ್ಯಾರ್ಥಿನಿಯರಲ್ಲೂ ಆತಂಕದ ಭೀತಿ ಎದುರಾಗಿದೆ. ಜಿಲ್ಲೆಯಲ್ಲಿ ಗುರುವಾರ 51 ಪ್ರಕರಣಗಳು ಪತ್ತೆಯಾಗಿದ್ದು, ಶುಕ್ರವಾರ ಒಟ್ಟು 47 ಪ್ರಕರಣಗಳು ಪತ್ತೆಯಾಗಿವೆ.










