ಚಿಕ್ಕಮಗಳೂರು: ಜಾನಪದ ಸಮ್ಮೇಳನಾಧ್ಯಕ್ಷರಾಗಿ ಕಾರೇಹಳ್ಳಿ ಬಸಪ್ಪ ಆಯ್ಕೆ…

101
firstsuddi

ಚಿಕ್ಕಮಗಳೂರು: ತರೀಕೆರೆ ತಾಲೂಕಿನ ನಂದೀಪುರದಲ್ಲಿ ಮಾ.12ರಂದು ನಡೆಯಲಿರುವ ಶಿವನಿ ಹೋಬಳಿ ಮಟ್ಟದ ಜಾನಪದ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಕಾರೇಹಳ್ಳಿ ಬಸಪ್ಪ ಅವರನ್ನು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳು ನಿನ್ನೆ ಅಧಿಕೃತವಾಗಿ ಆಹ್ವಾನಿಸಿದರು.

ಹಣ್ಣೇಮಠದ ಶ್ರೀ ಮರುಳಸಿದ್ದ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಕಾರೇಹಳ್ಳಿಯ ಬಸಪ್ಪ ಅವರ ನಿವಾಸಕ್ಕೆ ತೆರಳಿದ ಪರಿಷತ್ತಿನ ಪದಾಧಿಕಾರಿಗಳು ಮತ್ತು ಮುಖಂಡರು ಬಸಪ್ಪ ಅವರನ್ನು ಸನ್ಮಾನಿಸಿ, ಫಲ ತಾಂಬೂಲ ನೀಡಿ ಸಮ್ಮೇಳನಕ್ಕೆ ಆಗಮಿಸಿ ಯಶಸ್ವಿಯಾಗಿ ನಡೆಸಿ ಕೊಡುವಂತೆ ಮನವಿ ಮಾಡಿದರು.

ಸಮ್ಮೇಳನಾಧ್ಯಕ್ಷರನ್ನು ಸನ್ಮಾನಿಸಿ ಆಶೀರ್ವಚನ ನೀಡಿದ ಶ್ರೀ ಮರುಳಸಿದ್ದ ಶಿವಾಚಾರ್ಯ ಸ್ವಾಮೀಜಿ ಆಧುನಿಕತೆಯ ಅಬ್ಬರಕ್ಕೆ ಸಿಲುಕಿ ಕಣ್ಮರೆಯಾಗುತ್ತಿರುವ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿಯಬೇಕಾದರೆ ಹಳ್ಳಿ ಹಳ್ಳಿಗಳಲ್ಲೂ ಜಾನಪದ ಸಮ್ಮೇಳನ ಮತ್ತು ಕಾರ್ಯಕ್ರಮಗಳುನ್ನು ನಡೆಸಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ನೂರಾರು ಜನರಿಗೆ ಜಾನಪದ ಕಲೆಯನ್ನು ದಾರೆ ಎರೆಯುವ ಮೂಲಕ ಜಿಲ್ಲೆಯಲ್ಲಿ ಜಾನಪದವನ್ನು ಉಳಿಸಿ ಬೆಳೆಸಿರುವ ಹಿರಿಯ ವೀರಗಾಸೆ ಕಲಾವಿದ ಕಾರೇಹಳ್ಳಿ ಬಸಪ್ಪ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿರುವುದು ತಮಗೆ ಅತ್ಯಂತ ಹೆಮ್ಮೆ ಮತ್ತು ಸಂತಸ ತಂದಿದೆ ಎಂದರು.

ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಕಾರೇಹಳ್ಳಿ ಬಸಪ್ಪ ತಮ್ಮನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ತಮ್ಮ ಸಾಧನೆಗೆ ಇನ್ನಷ್ಟು ಸ್ಪೂರ್ತಿ ತಂದಿದೆ ಎಂದು ತಿಳಿಸಿದರು.

ಹಿರಿಯ ವೀರಗಾಸೆ ಕಲಾವಿದ ಡಾ.ಮಾಳೇನಹಳ್ಳಿ ಬಸಪ್ಪ, ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಪದಾಧಿಕಾರಿಗಳಾದ ಚಿಕ್ಕನಲ್ಲೂರು ಜಯಣ್ಣ, ತಿಪ್ಪೇಶ್ ದೇವರಾಜ್, ಗಿರೀಶ್, ಹಾಲಯ್ಯ, ಮರುಳ ಸಿದ್ದಪ್ಪ ಹಾಜರಿದ್ದರು.