ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ…!!

924
ಚಿಕ್ಕಮಗಳೂರು:  ಮಹಾಮಾರಿ ಕೊರೊನಾ ವೈರಸ್ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ಈ ಹಿನ್ನೆಲೆ,ಜಿಲ್ಲೆಯಲ್ಲಿ  ಇಂದಿನಿಂದ ಮಾರ್ಚ್ 31 ರವರೆಗೆ ಫುಲ್ ಲಾಕ್ ಡೌನ್ ಆಗಲಿದ್ದು ಮಧ್ಯರಾತ್ರಿಯಿಂದಲೇ ಜಿಲ್ಲೆಯಲ್ಲಿ ಐಪಿಸಿ ಸೆಕ್ಷನ್ 144 ಜಾರಿಯಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಐದು ಜನರಿಗಿಂತ ಹೆಚ್ಚು ಜನರು ಗುಂಪುಗೂಡುವಂತಿಲ್ಲ. ಸಾರ್ವಜನಿಕ ಎಲ್ಲಾ ಸಂಚಾರ ವ್ಯವಸ್ಥೆ ಸಂಪೂರ್ಣ ಬಂದ್ ಆಗಿದ್ದು, ಖಾಸಗೀ ವಾಹನಗಳನ್ನೂ ಓಡಿಸುವಂತಿಲ್ಲ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ‌ ಬಗಾದಿ ಗೌತಂ ಆದೇಶಿಸಿದ್ದಾರೆ. ಔಷಧಿ ಅಂಗಡಿ, ಆಸ್ಪತ್ರೆ ಮತ್ತು ಪೆಟ್ರೋಲ್ ಬಂಕ್ ಗಳು ಮಾತ್ರ ತೆರೆದಿರಲಿದ್ದು, ಆಹಾರ, ದಿನಸಿ ಮತ್ತು ಅಗತ್ಯ ವಸ್ತುಗಳ ಅಂಗಡಿಗಳು ಮಧ್ಯಾಹ್ನ 12 ಗಂಟೆಯಿಂದ 2 ಗಂಟೆವರೆಗೆ ಮಾತ್ರ ತೆರೆದಿರಲಿವೆ. ಉಳಿದಂತೆ ಎಲ್ಲವೂ ಬಂದ್ ಆಗಲಿವೆ. ಇನ್ನು ಅಂಚೆ, ಬ್ಯಾಂಕ್, ಅಗ್ನಿಶಾಮಕ ಮತ್ತು ಕಂದಾಯ ಇಲಾಖೆಗಳು ಮಾತ್ರವೇ ಕೆಲಸ ನಿರ್ವಹಿಸಲಿದ್ದು, ಉಳಿದ ಸರ್ಕಾರಿ ಇಲಾಖೆಗಳ ಕಚೇರಿಗಳಿಗೂ ರಜೆ ಘೋಷಿಸಲಾಗಿದೆ. ಇನ್ನು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ನಿಗಾವಹಿಸಲಾಗಿದೆ. ಅಲ್ಲದೆ ಯಾವುದೇ ವಾಹನಗಳ ಅಥವಾ ಜನರ ಓಡಾಟಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಅಲ್ಲದೆ ಹೋಂ ಕ್ವಾರಂಟೈನ್ ನಲ್ಲಿ ಇರುವವರು ಮನೆಬಿಟ್ಟು ಹೊರಗೆ ಓಡಾಡುವಂತಿಲ್ಲ. ಇದನ್ನು ಉಲ್ಲಂಘಿಸಿದವರಿಗೆ ಐಪಿಸಿ ಸೆಕ್ಷನ್ 188, 269, 270  ಮತ್ತು ‌271 ಅಡಿಯಲ್ಲಿ ಪ್ರಕರಣ ದಾಖಲಿಸಿ ಎರಡು ವರ್ಷದವರೆಗೆ ಜೈಲು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.