ಚಿಕ್ಕಮಗಳೂರು : ದೇಶ ಬಲಾಡ್ಯಗೊಂಡು ಅಭಿವೃದ್ದಿಯಲ್ಲಿ ವಿಶ್ವಮಟ್ಟದಲ್ಲಿ ತಲೆಯೆತ್ತಿ ನಿಲ್ಲಬೇಕಾದರೆ ನಮ್ಮ ಯುವ ಜನತೆ ಮಾನಸಿಕ ಮತ್ತು ದೈಹಿಕವಾಗಿ ಸಧೃಡರಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್ ಅವರು ಸಲಹೆ ಮಾಡಿದರು.
ಭಾರತ ಸೇವಾದಳದ ಜ್ಞಾನಜ್ಯೋತಿ ಘಟಕ ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಇಂದು ಆಯೋಜಿಸಿದ್ದ ಕೇಂದ್ರ ಸರ್ಕಾರದ ಫಿಟ್ ಇಂಡಿಯಾ ಸ್ಕೂಲ್ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯಾವುದೇ ದೇಶದ ಮೌಲ್ಯಮಾಪನ ಮಾಡುವುದು ಆ ದೇಶದ ಕೈಗಾರಿಕೆಗಳು ಮತ್ತು ಕಟ್ಟಡಗಳಿಂದಲ್ಲ, ಅಲ್ಲಿನ ಮಾನವ ಸಂಪನ್ಮೂಲ ಹೇಗಿದೆ ಎಂಬುದರ ಮೇಲೆ. ಆರೋಗ್ಯವಂತ ದೇಹದಲ್ಲಿ ಆರೋಗ್ಯವಾದ ಮನಸ್ಸಿರುತ್ತದೆ ಹಾಗಾಗಿ ರಾಷ್ಟ್ರದ ಅಭಿವೃದ್ದಿಗಾಗಿ ನಮ್ಮ ಯುವ ಜನತೆ ದುಶ್ಚಟಗಳಿಗೆ ಬಲಿಯಾಗದೇ ಆರೋಗ್ಯವಂತರಾಗಿರಬೇಕು ಎಂದು ಕಿವಿಮಾತು ಹೇಳಿದರು.
ನಮಗಿಂತ ಕನಿಷ್ಠ ಜನಸಂಖ್ಯೆಯಿರುವ ದೇಶಗಳು ಒಲಂಪಿಕ್ಸ್ ಕ್ರೀಡಾ ಕೂಟಗಳಲ್ಲಿ ನಮಗಿಂತ ಹೆಚ್ಚು ಪದಕಗಳನ್ನು ಬಾಚುತ್ತಿವೆ ಅದಕ್ಕೆ ಮೂಲ ಕಾರಣ ಆ ದೇಶಗಳ ಯುವಜನರ ದೇಹ ಮತ್ತು ಮನಸ್ಸನ್ನು ಸಧೃಡಗೊಳಿಸುವ ತರಬೇತಿ ನೀಡುತ್ತಿರುವುದು ಎಂದ ಅವರು ನಮ್ಮ ರಾಷ್ಟ್ರದಲ್ಲೂ ಆ ವ್ಯವಸ್ಥೆ ಜಾರಿಯಾಗಬೇಕು ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಜಗದೀಶಾಚಾರ್ ಮಾತನಾಡಿ ದೇಶವನ್ನು ಸುಭದ್ರವಾಗಿ ಕಟ್ಟಬೇಕಾದರೆ ಎಲ್ಲರೂ ಆರೋಗ್ಯವಂತರಾಗಿರಬೇಕು ಹಾಗಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಫಿಟ್ ಇಂಡಿಯಾ ಸಪ್ತಾಹವನ್ನು ಎಲ್ಲಾ ಶಾಲೆಗಳಲ್ಲೂ ಆಚರಿಸಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಸೇವಾದಳದ ತಾಲ್ಲೂಕು ಸಂಘಟಕ ಎಸ್.ಈ.ಲೋಕೇಶ್ವರಾಚಾರ್ ಸಪ್ತಾಹದ ಅಂಗವಾಗಿ ಏಳು ದಿನಗಳ ಕಾಲ ವಿದ್ಯಾರ್ಥಿಗಳಿಗೆ ಯೋಗಾಸನ, ಸೂರ್ಯ ನಮಸ್ಕಾರ, ವ್ಯಾಯಾಮ ಕಲಿಸಲಾಗುವುದು, ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ಮತ್ತು ವಿವಿಧ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಇತ್ತೀಚೆಗೆ ನಡೆದ ರಾಷ್ಟ್ರೀಯ ಭಾವೈಕ್ಯತಾ ಸಪ್ತಾಹದಲ್ಲಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಮಾರಂಭದಲ್ಲಿ ಬಹುಮಾನ, ಪ್ರಮಾಣ ಪತ್ರ ವಿತರಿಸಲಾಯಿತು.
ಮುಖ್ಯ ಶಿಕ್ಷಕಿ ಬಿ.ಆರ್.ಗೀತಾ ಅವರು ಅಧ್ಯಕ್ಷತೆ ವಹಿಸಿದ್ದರು, ಶಿಕ್ಷಕಿ ಸಾವಿತ್ರಿ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶಪ್ಪ, ತಮಿಳು ಶಾಲೆಯ ಮುಖ್ಯ ಶಿಕ್ಷಕಿ ವಾಣಿ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ದೇಶ ಬಲಾಡ್ಯಗೊಂಡು ವಿಶ್ವಮಟ್ಟದಲ್ಲಿ ತಲೆಯೆತ್ತಿ ನಿಲ್ಲಬೇಕಾದರೆ ಯುವ ಜನತೆ ಮಾನಸಿಕವಾಗಿ ಸಧೃಡರಾಗಬೇಕು :...










