ಚಿಕ್ಕಮಗಳೂರು : ನಗರದ ಮಲ್ಲಂದೂರು ರಸ್ತೆಯಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ…

170
firstsuddi

ಚಿಕ್ಕಮಗಳೂರು : ನಗರದ ಮಲ್ಲಂದೂರು ರಸ್ತೆಯಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸುವಂತೆ ರಾಜ್ಯ ಮಾಹಿತಿ ಹಕ್ಕು ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆ ಕಾರ್ಯಕರ್ತರ ವೇದಿಕೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಡಾ|| ಬಗಾಧಿ ಗೌತಂ ಅವರನ್ನು ಭೇಟಿ ಮಾಡಿದ ವೇದಿಕೆಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ನಗರದ ಮಲ್ಲಂದೂರು ರಸ್ತೆಯಲ್ಲಿ ಕೆಲವು ವರ್ಷಗಳ ಹಿಂದೆ ನಗರ ಸಭೆಯ ಸಾರ್ವಜನಿಕ ಶೌಚಾಲಯವಿತ್ತು, ಇತ್ತೀಚಿನ ವರ್ಷಗಳಲ್ಲಿ ಅದು ಕಣ್ಮರೆಯಾಗಿದೆ ಆದರೆ ನಗರಸಭೆಯ ದಾಖಲಾತಿಯಲ್ಲಿ ಮಾತ್ರ ಈಗಲೂ ಶೌಚಾಲಯವಿದೆ ಎಂದು ಹೇಳಿದರು.
ಮಲ್ಲಂದೂರು ರಸ್ತೆ ಅತ್ಯಂತ ಜನಸಂದಣಿಯುಳ್ಳ ರಸ್ತೆಯಾಗಿದ್ದು, ಶೌಚಾಲಯವಿಲ್ಲದಿರುವುದರಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ ಎಂದು ತಿಳಿಸಿದರು.
ಮಲ್ಲಂದೂರು ರಸ್ತೆಯಲ್ಲಿ ಕೆಲವು ವರ್ಷಗಳ ಹಿಂದೆ ಇದ್ದ ಜಿಲ್ಲಾ ಸರ್ಕಾರಿ ವಾಹನ ಚಾಲಕರ ನಿವೇಶನ ಇದೀಗ ಪರಭಾರೆಯಾಗಿದ್ದು, ಅದನ್ನು ವಾಹನ ಚಾಲಕರ ಸಂಘಕ್ಕೇ ಮರಳಿ ನೀಡಬೇಕು ಎಂದು ಆಗ್ರಹಿಸಿದರು.
ಮಾಹಿತಿ ಹಕ್ಕು ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆ ಕಾರ್ಯಕರ್ತರ ವೇದಿಕೆಯ ರಾಜ್ಯ ನಿರ್ದೇಶಕ ಸೋಮಾನಾಯಕ್, ಜಿಲ್ಲಾಧ್ಯಕ್ಷ ಪಿ.ಕುಮಾರ್, ಕಾರ್ಯದರ್ಶಿ ಸಿದ್ದೇಶ್, ತಾಲ್ಲೂಕು ಅಧ್ಯಕ್ಷ ಮಂಜುನಾಥ್, ನ್ಯಾಯವಾದಿ ಜೆ.ಕೆ.ರುದ್ರೇಗೌಡ, ರಾಘವೇಂದ್ರ ಹಾಜರಿದ್ದರು.