ಚಿಕ್ಕಮಗಳೂರು : ಶರನ್ನವರಾತ್ರಿ ಹಬ್ಬದ ಅಂಗವಾಗಿ ನಗರದ ಸುಗ್ಗಿಕಲ್ಲು ಬಡಾವಣೆಯ ಪುರೋಹಿತ ಅಶ್ವತ್ಥನಾರಾಯಣಾಚಾರ್ಯ ವಿ.ಜೋಷಿ ಅವರ ಮನೆಯಲ್ಲಿ ಪ್ರತಿಷ್ಠಾಪಿಸಿರುವ ಸಾಂಪ್ರದಾಯಿಕ ಪಟ್ಟದ ಗೊಂಬೆಗಳು, ಮೈಸೂರು ರಾಜ ಪರಂಪರೆಯ ಸಾಂಸ್ಕøತಿಕ ಮತ್ತು ಸಾಂಪ್ರದಾಯಿಕ ವೈಭವವನ್ನು ಅನಾವರಣಗೊಳಿಸಿವೆ.
ಯಧು ವಂಶಸ್ಥರ ಪರಂಪರೆಯ ಕೆಂಪು ಚಂದನದ ಮರದಲ್ಲಿ ಕೆತ್ತಲಾದ ಪಟ್ಟದ ಗೊಂಬೆಗಳು ಮೈಸೂರು ಮಹಾರಾಜರ ದಸರಾ ದರ್ಬಾರ್, ಜಂಬೂ ಸವಾರಿ, ಅರಮನೆ, ಅರಸರ ಸಾಂಪ್ರದಾಯಿಕ ಆಚರಣೆಗಳ ವೈಭವವನ್ನು ಅನಾವರಣಗೊಳಿಸಿದ್ದರೆ ಇನ್ನು ಕೆಲವು ಗೊಂಬೆಗಳು ವಿವಿಧ ದೇವತೆಗಳ ವಿವಿಧ ಭಂಗಿಗಳನ್ನು ಪ್ರದರ್ಶಿಸುತ್ತಿವೆ.
ಪದ್ಮಾವತಿ ಹಾಗೂ ಶ್ರೀನಿವಾಸನ ವಿವಾಹದ ವೈಭವವನ್ನು ಸಾರುವ ಶ್ರೀನಿವಾಸ ಕಲ್ಯಾಣದ ಗೊಂಬೆಗಳು ನೋಡುಗರ ಗಮನ ಸೆಳೆಯುತ್ತಿವೆ, ವರನ ದಿಬ್ಬಣವನ್ನು ಎದುರುಗೊಳ್ಳುವುದು, ವರಪೂಜೆ, ಮಾಂಗಲ್ಯ ಧಾರಣೆ. ಲಾಜಾ ಹೋಮ, ಸಪ್ತಪದಿ ತುಳಿಯುವುದು ಸೇರಿದಂತೆ ಮದುವೆಯ ವಿವಿಧ ಆಚರಣೆಗಳ ದೃಶ್ಯಗಳು ಕಣ್ಮನ ತಣಿಸುತ್ತಿವೆ.
ಕೃಷಿ ಚಟುವಟಿಕೆ, ಸಂತೆಯ ದೃಶ್ಯಗಳು, ಭಾರತೀಯ ಹಬ್ಬ, ಹರಿದಿನಗಳ ವಿವಿಧ ಆಚರಣೆಗಳನ್ನು ತೆರೆದಿಡುವ ನೂರಾರು ಗೊಂಬೆಗಳು ಮನಸ್ಸಿಗೆ ಮುದ ನೀಡುತ್ತಿವೆ.
ಪಟ್ಟದ ಗೊಂಬೆಗಳ ಕುರಿತು ವಿವರಣೆ ನೀಡಿದ ಪುರೋಹಿತ ಅಶ್ವತ್ಥನಾರಾಯಣಾಚಾರ್ಯ ವಿ.ಜೋಷಿ ಆಧುನಿಕತೆಯಿಂದಾಗಿ ನಮ್ಮ ಸಂಸ್ಕøತಿ, ಸಂಸ್ಕಾರ ಮತ್ತು ಸಂಪ್ರದಾಯಗಳ ಅರಿವೇ ಇಲ್ಲದಿರುವ ಇಂದಿನ ಪೀಳಿಗೆಯ ಮಕ್ಕಳಿಗೆ ಅವುಗಳನ್ನು ಈ ಮೂಲಕ ಪರಿಚಯಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಉದ್ದೇಶದಿಂದ ಕಳೆದ 18 ವರ್ಷಗಳಿಂದ ಪ್ರತಿವರ್ಷ ಮನೆಯಲ್ಲಿ ಪಟ್ಟದ ಗೊಂಬೆಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ ಎಂದು ತಿಳಿಸಿದರು.
ಇದರ ಜೊತೆಗೆ ನವರಾತ್ರಿಯ 9 ದಿನಗಳ ಕಾಲ ಪ್ರತಿದಿನ ಸಂಜೆ ಶ್ರೀನಿವಾಸ ಕಲ್ಯಾಣದ ಪುರಾಣ ಪ್ರವಚನವನ್ನು ಮಾಡಲಾಗುತ್ತಿದೆ ಎಂದರು.
ಇಂದಿನ ಮಕ್ಕಳಿಗೆ ನಮ್ಮ ಹಬ್ಬ ಹರಿದಿನಗಳು ಮತ್ತು ಸಂಪ್ರದಾಯಗಳನ್ನು ತಿಳಿಸುವ ನಿಟ್ಟಿನಲ್ಲಿ ತಮ್ಮ ತವರು ಮನೆಯಿಂದ ಬಳುವಳಿಯಾಗಿ ಬಂದಿರುವ ಪಟ್ಟದ ಗೊಂಬೆಗಳ ಪ್ರತಿಷ್ಠಾಪನೆ ಮತ್ತು ಪೂಜೆಯನ್ನು ಮುಂದುವರೆಸುತ್ತಿರುವುದಾಗಿ ಆಯೋಜಕಿ ಅನುರಾಧ ಜೋಷಿ ತಿಳಿಸಿದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಪಟ್ಟದ ಗೊಂಬೆಗಳ ಕುರಿತು ವಿವರಣೆ ನೀಡಿದ ಪುರೋಹಿತ ಅಶ್ವತ್ಥನಾರಾಯಣಾಚಾರ್ಯ ವಿ.ಜೋಷಿ…










