ಚಿಕ್ಕಮಗಳೂರು : ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಕೆಂಪನಹಳ್ಳಿಯಲ್ಲಿ ನಡೆದಿದೆ. ರಂಜಿತಾ(23) ಆತ್ಮಹತ್ಯೆಗೆ ಶರಣಾದ ಪತ್ನಿ ಎಂದು ಗುರುತಿಸಲಾಗಿದೆ. ಕಡೂರು ತಾಲ್ಲೂಕಿನ ಬೀರೂರು ಸಮೀಪದ ಹೊಗರೆಹಳ್ಳಿ ಗ್ರಾಮದ ರಂಜಿತಾ ಅವರು ಕಳೆದ ಮೂರು ವರ್ಷದ ಹಿಂದೆ ಚಿಕ್ಕಮಗಳೂರಿನ ಅರುಣ್ ಎಂಬುವವರನ್ನು ವಿವಾಹವಾಗಿದ್ದರು. ಆದರೆ ಅರುಣ್ ಅವರು ವಿವಾಹಕ್ಕೂ ಮೊದಲೇ ಪರ ಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಈ ಹಿಂದೆ ಪತ್ನಿಯ ಅಕ್ರಮ ಸಂಬಂಧ ಕುರಿತು ರಂಜಿತಾ ಅವರು ತಮ್ಮ ಸಂಬಂಧಿಕರಿಗೂ ತಿಳಿಸಿದ್ದು, ಇನ್ನು ಮುಂದೆ ಹೀಗೆ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ ಮತ್ತೆ ಪರ ಸ್ತ್ರೀಯೊಂದಿಗಿನ ಸಂಬಂಧ ಮುಂದುವರೆಸಿದ್ದರು. ಬಳಿಕ ಅರುಣ್ ಹಾಗೂ ಅವರ ಗೆಳತಿಯ ಕಿರುಕುಳದಿಂದ ಬೇಸತ್ತು ರಂಜಿತಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಪತಿ ಅರುಣ್ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಳಿಕ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಂಜಿತಾ ಪೋಷಕರು ಅರುಣ್ ಹಾಗೂ ಅವರ ಪೋಷಕರ ವಿರುದ್ಧ ಆಕ್ರೋಶ ಹೊರಹಾಕಿದ್ದು, ಈ ಕುರಿತು ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.