ಚಿಕ್ಕಮಗಳೂರು : ಪದವಿ ಶಿಕ್ಷಣದಲ್ಲಿ ಭಾಷಾ ಕಲಿಕೆಗೆ ವಿದ್ಯಾರ್ಥಿಗಳಿಗೆ ಕನಿಷ್ಟ ಮೂರು ವರ್ಷಗಳ ಅವಕಾಶ ಕಲ್ಪಿಸುವಂತೆ ಸಿರಿಗನ್ನಡ ವೇದಿಕೆ ಮತ್ತು ಅಜ್ಜಂಪುರ ಜಿ.ಸೂರಿ ಪ್ರತಿಷ್ಟಾನ ರಾಜ್ಯಸರ್ಕಾರವನ್ನು ಒತ್ತಾಯಿಸಿದೆ.
ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರನ್ನು ಇಂದು ಭೇಟಿ ಮಾಡಿದ ಎರಡೂ ಸಂಸ್ಥೆಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಈ ಹಿಂದೆ ಇದ್ದ ಮೂರು ವರ್ಷಗಳ ಪದವಿ ಶಿಕ್ಷಣದಲ್ಲಿ ಭಾಷಾ ಕಲಿಕೆಗೆ ಎರಡು ವರ್ಷ ಅವಕಾಶವಿತ್ತು. ಅದರಿಂದಾಗಿ ವಿದ್ಯಾರ್ಥಿಗಳಲ್ಲಿ ಭಾಷಾ ಕೌಶಲ್ಯ ಬೆಳೆಯುತ್ತಿತ್ತು. ಆದರೆ ಇದೀಗ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪದವಿ ಶಿಕ್ಷಣಕ್ಕೆ ನಾಲ್ಕು ವರ್ಷಗಳನ್ನು ನಿಗಧಿ ಪಡಿಸಲಾಗಿದ್ದು ಅದರಲ್ಲಿ ಭಾಷಾ ಕಲಿಕೆಗೆ ಕೇವಲ ಒಂದೇ ವರ್ಷವನ್ನು ನಿಗಧಿಗೊಳಿಸಿರುವುದು ವಿಷಾಧನೀಯ ಎಂದರು.
ಭಾಷಾ ಕಲಿಕೆಗೆ ಹೆಚ್ಚಿನ ಒತ್ತು ನೀಡಿ ಕಲಿಕಾ ಅವಧಿಯನ್ನು ಹೆಚ್ಚಿಸಬೇಕಾಗಿದ್ದ ಸರ್ಕಾರ ಅವಧಿಯನ್ನು ಒಂದು ವರ್ಷಕ್ಕೆ ಇಳಿಸಿರುವುದು ದುರಂತ ಎಂದ ಪದಾಧಿಕಾರಿಗಳು ಹೀಗಾದರೆ ಕನ್ನಡ ಭಾಷೆ, ಸಂಸ್ಕøತಿ, ಪರಂಪರೆ ಬೆಳೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಎಲ್ಲಾ ವೃತ್ತಿಪರ ಕೋರ್ಸ್ಗಳಲ್ಲಿ ಕನ್ನಡ ಭಾಷೆ ಅಧ್ಯಯನಕ್ಕೆ ಕನಿಷ್ಟ ಎರಡು ವರ್ಷಗಳ ಅವಧಿ ನಿಗಧಿಗೊಳಿಸಬೇಕು. ಕೇಂದ್ರ ಮತ್ತು ರಾಜ್ಯಸರ್ಕಾರಗಳು ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಕನ್ನಡ ಮಾಧ್ಯಮದ ಪತ್ರಿಕೆಯನ್ನು ಬಳಸಬೇಕು ಎಂದು ಒತ್ತಾಯಿಸಿದರು.
ಇತ್ತೀಚೆಗೆ ಲೋಕಸಭಾ ಸಚಿವಾಲಯದಡಿಯಲ್ಲಿ ಬರುವ ಪಾರ್ಲಿಮೆಂಟರಿ ರಿಸರ್ಚ್ ಸಂಸ್ಥೆಯು ಸಂಸತ್ ಸದಸ್ಯರಿಗೆ, ಶಾಸಕರಿಗೆ ಮತ್ತು ಅಧಿಕಾರಿಗಳಿಗೆ ಆರು ವಿದೇಶಿ ಹಾಗೂ ಆರು ಭಾರತೀಯ ಭಾಷೆಗಳನ್ನು ಕಲಿಸಲು ಮುಂದಾಗಿದ್ದು ಅದರಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿ ಗಳಿಸಿರುವ ಕನ್ನಡ ಭಾಷೆಯನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.
ಪಾರ್ಲಿಮೆಂಟರಿ ರಿಸರ್ಚ್ ಸಂಸ್ಥೆಯು ಲೋಕಸಭಾ ಸದಸ್ಯರು, ಶಾಸಕರು ಮತ್ತು ಅಧಿಕಾರಿಗಳಿಗೆ ಇನ್ನಿತರ ಭಾಷೆಗಳ ಜೊತೆಗೆ ಕನ್ನಡವನ್ನೂ ಕಲಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಅಜ್ಜಂಪುರ ಜಿ.ಸೂರಿ ಪ್ರತಿಷ್ಟಾನದ ಅಧ್ಯಕ್ಷ ಸೂರಿ ಶ್ರೀನಿವಾಸ್, ಸಂಚಾಲಕ ಪೃಥ್ವಿಸೂರಿ, ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಟಿ.ಗೋವಿಂದಸ್ವಾಮಿ, ಸಹ ಕಾರ್ಯದರ್ಶಿ ನಂಜುಂಡಪ್ಪ, ಕಾರ್ಯದರ್ಶಿ ಎ.ಆರ್.ಪ್ರಕಾಶ್, ಹೆಚ್.ಎಂ.ಚೇತನ್, ಎಂ.ಜಶ್ವಂತ್, ವರಸಿದ್ದಿ ವೇಣುಗೋಪಾಲ್ ಹಾಜರಿದ್ದರು.










