ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಹೆಮ್ಮೆಯಾಗಿರುವ ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಅಥವಾ ಮುತ್ತೋಡಿ ಅಭಯಾರಣ್ಯಕ್ಕೆ ಈಗ 25 ವರ್ಷದ ಸಂಭ್ರಮ. ಹಸಿರು ಆಲಯ, ನಿಸರ್ಗಮಾತೆಯ ಭವ್ಯ ಭೂಸ್ವರ್ಗ, ಅನನ್ಯ ಕಾಡು ಪ್ರಾಣಿಗಳ ಆವಾಸಸ್ಥಾನ, ನಿತ್ಯ ನಿರ್ಮಲ ಪರಿಸರದೋಕುಳಿಯಲ್ಲಿ ಮಿಂದೇಳುವ ಕಾಡು ಪ್ರಾಣಿಗಳು. ಇಂತಹುದೊಂದು ಅಪರೂಪದ ಅಮೋಘ ಸಸ್ಯ ಸಂಪತ್ತಿನ ಖಣಿ ಇರುವ ಚಿಕ್ಕಮಗಳೂರಿನ ಭದ್ರಾ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಈಗ ಬೆಳ್ಳಿ ಹಬ್ಬದ ಸಂಭ್ರಮ. 25 ವರ್ಷದ ಸಂಭ್ರಮದಲ್ಲಿರುವ ಭದ್ರಾ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಕಾಡುಪ್ರಾಣಿಗಳ ಸಂಖ್ಯೆ ಹೆಚ್ಚುತ್ತಿದೆ. ಇದು ಇಲ್ಲಿನ ಹಚ್ಚಹಸಿರಿನ ಸಮೃದ್ದ ಅರಣ್ಯ ಪ್ರದೇಶಕ್ಕೆ ಸಾಕ್ಷಿಯಾಗಿದೆ. ಸಂರಕ್ಷಿತ ಅರಣ್ಯ ಪ್ರದೇಶವಾಗಿರುವ ಭದ್ರಾ ವನ್ಯಜೀವಿ ಅಭಯಾರಣ್ಯದಲ್ಲಿ 38 ಕಿಲೋಮೀಟರ್ ವ್ಯಾಪ್ತಿಯಲ್ಲಿ ಪ್ರಾಜೆಕ್ಟ್ ಟೈಗರ್ ರಿಸರ್ವ್ ಕೂಡ ಆಗಿದೆ. ಭದ್ರಾ ಅಭಯಾರಣ್ಯ ಬೆಟ್ಟಗಳಿಂದ ಮತ್ತು ಕಡಿದಾದ ಇಳಿಜಾರಿನಿಂದ ಸುತ್ತುವರೆದಿದ್ದು ಮುಳ್ಳಯ್ಯನಗಿರಿ, ಹೆಬ್ಬೆಗಿರಿ, ಗಂಗೆಗಿರಿ ಮತ್ತು ಬಾಬಾಬುಡನ್‍ಗಿರಿ ಬೆಟ್ಟ ಶ್ರೇಣಿಗಳ ಅಪರೂಪದ ನೋಟವಿದು. ಒಟ್ಟು 499 ಚದರ್ ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಈ ಅಭಯಾರಣ್ಯದಲ್ಲಿ ಸಾವಿರಾರು ಪ್ರಾಣಿಗಳಿಗೆ ಆಶ್ರಯ ಪಡೆದಿವೆ. 1952ರಲ್ಲಿ ‘ಜಾಗರ ವ್ಯಾಲಿ ವನ್ಯಜೀವಿ ಅಭಯಾರಣ್ಯ ಎಂದು ಇದನ್ನು ಘೋಷಿಸಲಾಗಿತ್ತು. 1974 ರಲ್ಲಿ ಸಸ್ಯ ಮತ್ತು ಪ್ರಾಣಿಗಳು, ಅದರ ಸುತ್ತಮುತ್ತಲಿನ ಒಂದು ವ್ಯವಸ್ಥಿತ ಸಮೀಕ್ಷೆ ನಂತರ ಅಭಯಾರಣ್ಯವನ್ನು ವಿಸ್ತರಿಸಲಾಯಿತು. ಇದೇ ವೇಳೆ ಜಾಗರ ವ್ಯಾಲಿ ವನ್ಯಜೀವಿ ಅಭಯಾರಣ್ಯಕ್ಕೆ ಭದ್ರಾ ವನ್ಯಜೀವಿ ಅಭಯಾರಣ್ಯ ಎಂದು ಮರುನಾಮಕರಣ ಮಾಡಲಾಯಿತು. ಭದ್ರಾ ವನ್ಯಜೀವಿ ಅಭಯಾರಣ್ಯವನ್ನು 1998 ರಲ್ಲಿ ದೇಶದ 25ನೇ ಪ್ರಾಜೆಕ್ಟ್ ಟೈಗರ್ ರಿಸರ್ವ್ ಎಂದು ಘೋಷಿಸಲಾಯಿತು. ಒಟ್ಟಿನಲ್ಲಿ ಸುಂದರ ಪರಿಸರ, ಪ್ರಾಚೀನ ದೇಗುಲಗಳನ್ನು ಹೊಂದಿರುವ ಚಿಕ್ಕಮಗಳೂರಿನಲ್ಲಿರುವ ಭದ್ರಾ ವನ್ಯಜೀವಿ ಅಭಯಾರಣ್ಯ ಜಿಲ್ಲೆಯ ಮತ್ತೊಂದು ಹೆಮ್ಮೆಯ ವಿಷಯವಾಗಿದ್ದು ಈಗ 25 ವರ್ಷದ ಸಂಭ್ರಮದಲ್ಲಿದೆ.










