ಚಿಕ್ಕಮಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದಾಗಿ ಕುರುಬ ಸಮಾಜ ಇಂದು ಒಂದಾಗಿ ರಾಜ್ಯ ಮಟ್ಟದಲ್ಲಿ ಸಂಘಟಿತವಾಗಲು ಸಾಧ್ಯವಾಗಿದೆ ಎಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ಹೇಳಿದರು.
ತಾಲ್ಲೂಕಿನ ಚಿಕ್ಕಗೌಜದಲ್ಲಿ ಸ್ಥಳೀಯ ಸಂಗೊಳ್ಳಿ ರಾಯಣ್ಣ ಯುವಕರ ಬಳಗ ಸ್ಥಾಪಿಸಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಅಧಿಕಾರಾವಧಿಯಲ್ಲಿ ಹಳ್ಳಹಳ್ಳಿಗಳಲ್ಲೂ ಕನಕ ಜಯಂತಿ ನಡೆಯುವಂತೆ ಮಾಡಿದರು, ಅದರಿಂದಾಗಿ ಕುರುಬ ಸಮುದಾಯ ಸಂಘಟಿತವಾಗಲು ಸಾಧ್ಯವಾಯಿತು, ಇದೀಗ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಆ ಸಮಾಜದ ಯುವಜನತೆ ಸಂಘಟಿತರಾಗುತ್ತಿದ್ದಾರೆ ಎಂದರು.
ಸಿದ್ದರಾಮಯ್ಯನವರು ಕುರುಬ ಸಮಾಜದ ಏಳಿಗೆಗಾಗಿ ಅಭಿವೃದ್ದಿ ಪ್ರಾಧಿಕಾರವನ್ನು ರಚಿಸಿದರು. ಬೆಂಗಳೂರಿನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಬೃಹತ್ ಗಾತ್ರದ ಪ್ರತಿಮೆಯನ್ನು ಸ್ಥಾಪಿಸಿದರು. ಅಲ್ಲಿನ ರೈಲು ನಿಲ್ದಾಣಕ್ಕೆ ರಾಯಣ್ಣನ ಹೆಸರನ್ನು ನಾಮಕರಣ ಮಾಡಿದರು ಎಂದು ತಿಳಿಸಿದರು.
ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣನ ಹೆಸರು ಮತ್ತು ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮನ ಹೆಸರಿಡುವಂತೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ರಾಜ್ಯದ ಬಹಳಷ್ಟು ನಗರ, ಪಟ್ಟಣ ಮತ್ತು ಹಳ್ಳಿಗಳಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ, ಅದರ ಜೊತೆಗೆ ಗಲಾಟೆ, ಜಗಳ, ಸಂಘರ್ಷವೂ ನಡೆಯುತ್ತಿದೆ ಎಂದು ವಿಷಾದಿಸಿದ ಅವರು ಪ್ರತಿಮೆ ಸ್ಥಾಪನೆ ಘರ್ಷಣೆಗೆ ಕಾರಣವಾಗಬಾರದು, ಹಾಗಾಗಿ ಕುರುಬ ಸಮಾಜದ ಯುವಜನತೆ ಸಹಬಾಳ್ವೆಗೆ ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು.
ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಅಪ್ರತಿಮ ದೇಶಭಕ್ತ, ಸ್ವಾಂತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಆದರ್ಶಗಳನ್ನು ಕುರುಬ ಸಮಾಜದ ಯುವಜನತೆ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾಸ್ತೇಗೌಡ ಮಾತನಾಡಿ ಗ್ರಾಮದಲ್ಲಿ ಸಮುದಾಯ ಭವನವನ್ನು ನಿರ್ಮಿಸಲಾಗುತ್ತಿದ್ದು, ಮುಂದಿನ ತಿಂಗಳು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಅದನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.
ಸಮಾರಂಭಕ್ಕೆ ಮುನ್ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು, ಪ್ರತಿಮೆ ಸ್ಥಾಪನೆಗೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು. ಕೆ.ಆರ್.ನಗರ ಕಾಗಿನೆಲೆ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕುರುಬರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತೇಗೌಡ ಅಧ್ಯಕ್ಷತೆ ವಹಿಸಿದ್ದರು, ರಾಜ್ಯ ನಿರ್ದೇಶಕ ಪುಟ್ಟೇಗೌಡ, ಜಿ.ಪಂ. ಮಾಜಿ ಅಧ್ಯಕ್ಷರಾದ ರೇಖಾ ಹುಲಿಯಪ್ಪಗೌಡ, ಎ.ಎನ್.ಮಹೇಶ್, ಸದಸ್ಯ ರವೀಂದ್ರ ಬೆಳವಾಡಿ, ತಾ.ಪಂ.ಸದಸ್ಯ ಮಲ್ಲೇಗೌಡ, ನಾಗರಾಜ್, ಸಂಗೊಳ್ಳಿ ರಾಯಣ್ಣ ಯುವಕರ ಬಳಗದ ಚಂದ್ರೇಗೌಡ, ಕುಮಾರ್ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಸಿದ್ದರಾಮಯ್ಯನವರಿಂದ ಕುರುಬ ಸಮಾಜ ಇಂದು ರಾಜ್ಯ ಮಟ್ಟದಲ್ಲಿ ಸಂಘಟಿತವಾಗಲು ಸಾಧ್ಯವಾಗಿದೆ : ಹೆಚ್.ಎಂ.ರೇವಣ್ಣ.










